ರಸ್ತೆಯ ತಿರುವಿನಲ್ಲಿ ಕುಳಿತಿದ್ದ 1 ವರ್ಷದ ಮಗು: ಖಾಸಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಮಲಪ್ಪುರಂ: ಜನದಟ್ಟಣೆಯಿಂದ ಕೂಡಿದ ಕಡಿದಾದ ತಿರುವಿನ ರಸ್ತೆಯ ಮಧ್ಯದಲ್ಲೇ ಕುಳಿತಿದ್ದ ಒಂದು ವರ್ಷದ ಹೆಣ್ಣು ಮಗುವೊಂದು ಖಾಸಗಿ ಬಸ್ ಚಾಲಕನ ಅದ್ಭುತ ಸಮಯಪ್ರಜ್ಞೆಯಿಂದಾಗಿ ಭೀಕರ ಅಪಘಾತದಿಂದ ಪವಾಡಸದೃಶವಾಗಿ ಪಾರಾಗಿರುವ ಆಘಾತಕಾರಿ ಘಟನೆ ಮಲಪ್ಪುರಂನ ಪುಲಿಕ್ಕಲ್ ಬಳಿ ಬುಧವಾರ ಸಂಭವಿಸಿದೆ. ಪುಲಿಕ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲಿಕ್ಕಲ್-ವಲಿಯಪರಂಬ ರಸ್ತೆಯ ಚೆರುಮುಟ್ಟಂ ಎಂಬಲ್ಲಿ ಈ ಮೈ ಜುಂ ಎನಿಸುವ ಘಟನೆ ನಡೆದಿದೆ.
ಪುತಿಯೇದತ್ ಪರಂಬು-ಫಿರೋಕ್ ಮಾರ್ಗದಲ್ಲಿ ಚಲಿಸುವ ‘ಸಫಾ ಮಾರ್ವಾ’ ಹೆಸರಿನ ಖಾಸಗಿ ಬಸ್ ಬುಧವಾರ ಚೆರುಮುಟ್ಟಂನ ತಿರುವಿನಲ್ಲಿ ಚಲಿಸುತ್ತಿದ್ದಾಗ, ರಸ್ತೆಯ ಮಧ್ಯದಲ್ಲಿ ಮಗುವೊಂದು ಕುಳಿತಿರುವುದನ್ನು ಚಾಲಕ ರಾಮಚಂದ್ರನ್ ಗಮನಿಸಿದ್ದಾರೆ. ತಕ್ಷಣವೇ ಶಾಕ್ ಆದ ಅವರು, ಸಮಯ ಪ್ರಜ್ಞೆಯಿಂದ ಬಸ್ ಅನ್ನು ಮಗುವಿನ ಹತ್ತಿರವೇ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಬಸ್ ನಿಲ್ಲುತ್ತಿದ್ದಂತೆ ಕಂಡಕ್ಟರ್ ನವಾಸ್ ಅವರು ತಕ್ಷಣವೇ ವಾಹನದಿಂದ ಕೆಳಗೆ ಇಳಿದು ಓಡಿ ಹೋಗಿ ರಸ್ತೆಯಲ್ಲಿದ್ದ ಮಗುವನ್ನು ಎತ್ತಿಕೊಂಡಿದ್ದಾರೆ. ಬಳಿಕ ಮಗುವನ್ನು ಸಮಾಧಾನಪಡಿಸುತ್ತಾ ಹತ್ತಿರದಲ್ಲಿದ್ದ ಮನೆಗೆ ಕರೆದೊಯ್ದಿದ್ದಾರೆ. ತನಿಖೆ ನಡೆಸಿದಾಗ ಅದು ಆ ಮಗುವಿನದ್ದೇ ಸ್ವಂತ ಮನೆ ಎಂಬುದು ಬೆಳಕಿಗೆ ಬಂದಿದೆ.
ಬಸ್ಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ರೋಮಾಂಚನಕಾರಿ ದೃಶ್ಯಗಳು ಸೆರೆಯಾಗಿವೆ. ಕಂಡಕ್ಟರ್ ನವಾಸ್ ಅವರು ರಸ್ತೆಯಿಂದ ಮಗುವನ್ನು ಎತ್ತಿಕೊಂಡ ಕೇವಲ ಎರಡೇ ಸೆಕೆಂಡುಗಳಲ್ಲಿ, ವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬಂದ ಸ್ಕೂಟರೊಂದು ಅದೇ ಜಾಗವನ್ನು ಹಾದು ಹೋಗಿರುವುದು ದೃಶ್ಯದಲ್ಲಿದೆ. ಮಗು ಕುಳಿತಿದ್ದ ಸ್ಥಳವು ಕಡಿದಾದ ತಿರುವಿನಿಂದ (Curve) ಕೂಡಿದ್ದರಿಂದ ಎದುರುಗಡೆಯಿಂದ ಬರುವ ವಾಹನ ಸವಾರರಿಗೆ ರಸ್ತೆಯಲ್ಲಿದ್ದ ಮಗು ಕಾಣಿಸುತ್ತಿರಲಿಲ್ಲ. ಒಂದು ವೇಳೆ ಬಸ್ ಚಾಲಕ ಬ್ರೇಕ್ ಹಾಕದೇ ಇರುತ್ತಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು.




