ಕೋಟೇಶ್ವರದ ಅಂಡರ್‌ಪಾಸ್‌ನಲ್ಲಿ ಗೂಡ್ಸ್ ಲಾರಿ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಕೋಟೇಶ್ವರದ ಅಂಡರ್‌ಪಾಸ್‌ನಲ್ಲಿ ಸೋಮವಾರ ಸಂಜೆ ಗೂಡ್ಸ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕೋಟೇಶ್ವರ ಸಮೀಪದ ಮಾರ್ಕೋಡು ನಿವಾಸಿ ಪ್ರದೀಪ್ ಪೂಜಾರಿ (35) ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ಗಾರೆ ಮೇಸ್ತ್ರಿಯಾಗಿದ್ದ ಇವರು ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ಸಂಜೆ ಉಡುಪಿ ಕಡೆಯಿಂದ ಬಂದ 10 ಚಕ್ರದ ಬೃಹತ್ ಗೂಡ್ಸ್ ಲಾರಿಯೊಂದು ಕೋಟೇಶ್ವರದ ಕಿರಿದಾದ ಅಂಡರ್‌ಪಾಸ್‌ನೊಳಗೆ ಪ್ರವೇಶಿಸಿದೆ. ಇದೇ ವೇಳೆ ಎದುರಿನಿಂದ ಬಂದ ಪ್ರದೀಪ್ ಪೂಜಾರಿ ಅವರ ಬೈಕ್‌ಗೆ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಲಾರಿಯ ಚಕ್ರಗಳಡಿ ಸಿಲುಕಿದ ಪ್ರದೀಪ್ ಅವರು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




