ರಾಜ್ಯಾದ್ಯಂತ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆ: ಪರಿಷ್ಕೃತ ಹೊಸ ದರವು ಇಂದಿನಿಂದಲೇ ಜಾರಿಗೆ
ಉಡುಪಿ: ತೈಲ ದರ ಮತ್ತು ಟೋಲ್ ದರ ಏರಿಕೆಯಿಂದ ಈಗ ಖಾಸಗಿ ಬಸ್ ಪ್ರಯಾಣವೂ ಮತ್ತಷ್ಟು ದುಬಾರಿಯಾಗಲಿದೆ. ರಾಜ್ಯಾದ್ಯಂತ ಸಂಚರಿಸುವ ಖಾಸಗಿ ಬಸ್‌ಗಳ (ಸ್ಟೇಜ್ ಕ್ಯಾರಿಯರ್) ಪ್ರಯಾಣ ದರವನ್ನು ಶೇ 3 ರಿಂದ ಶೇ 8 ರಷ್ಟು ಏರಿಕೆ ಮಾಡಲಾಗಿದ್ದು, ಪರಿಷ್ಕೃತ ಹೊಸ ದರವು ಜೂನ್ 9ರಿಂದಲೇ (ನಾಳೆ) ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಉಡುಪಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ದರ ಏರಿಕೆಯ ಅನಿವಾರ್ಯತೆ ಬಗ್ಗೆ ತಿಳಿಸಿದರು.
ರಾಜ್ಯ ಸರ್ಕಾರದ ಅಧಿಕೃತ ಅಧಿಸೂಚನೆಯ ನಿಯಮಗಳನ್ವಯ ಸೆಸ್ ವಿಧಿಸಲು ಅವಕಾಶವಿದ್ದು, ಅದರಂತೆಯೇ ಸದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂಧನ ದರ ಮಾತ್ರವಲ್ಲದೆ, ಬಸ್‌ಗಳಿಗೆ ಬಳಸುವ ಟೈರ್ ಹಾಗೂ ಟೈರ್ ರಸೋಲಿಂಗ್ (Resoling) ವೆಚ್ಚ, ಇಂಜಿನ್ ಬಿಡಿಭಾಗಗಳ (Spare Parts) ಬೆಲೆಯೂ ಗಗನಕ್ಕೇರಿದೆ. ಇದರಿಂದಾಗಿ ಖಾಸಗಿ ಬಸ್ ಮಾಲಕರು ದೈನಂದಿನ ನಿರ್ವಹಣೆ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರಾವಳಿಯ ಪ್ರಮುಖ ಮಾರ್ಗಗಳ ಪರಿಷ್ಕೃತ ಟಿಕೆಟ್ ದರಗಳ ವಿವರಗಳನ್ನು ನೀಡಲಾಯಿತು:
ಉಡುಪಿ – ಮಂಗಳೂರು: ಈ ಹಿಂದೆ ಇದ್ದ ₹95 ಟಿಕೆಟ್ ದರವು ಈಗ ₹100 ಕ್ಕೆ ಏರಿಕೆಯಾಗಿದೆ.
ಕುಂದಾಪುರ – ಉಡುಪಿ: ಈ ಹಿಂದೆ ಇದ್ದ ₹60 ದರವು ಈಗ ₹63 ಆಗಿದೆ.
ಉಡುಪಿ – ಮಣಿಪಾಲ: ಕನಿಷ್ಠ ಪ್ರಯಾಣ ದರ ₹12 ಇತ್ತು, ಅದು ನಾಳೆಯಿಂದ ₹15 ಆಗಲಿದೆ.ಪ್ರಯಾಣ ಸಲಹೆಗಳು
ಈ ಪತ್ರಿಕಾಗೋಷ್ಠಿಯಲ್ಲಿ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹಾಗೂ ಪ್ರಮುಖರಾದ ಸದಾನಂದ ಚಾತ್ರ ಉಪಸ್ಥಿತರಿದ್ದರು.




