ಬಂಟ್ವಾಳ: ಡಿವೈಡರ್ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಮಿನಿ ಬಸ್: ಯುವಕ ಮೃತ್ಯು, ಹಲವರಿಗೆ ಗಾಯ
ಬಂಟ್ವಾಳ: ಬೆಳ್ತಂಗಡಿಯಲ್ಲಿ ಸೀಮಂತ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಿನಿ ಬಸ್ಸೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ, ಮಂಗಳೂರು ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ಪುದು ಗ್ರಾಮದ 10ನೇ ಮೈಲಿಗಲ್ಲು ಎಂಬಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಮಂಗಳೂರು ಮೂಲದ ವಿಕಾಶ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇತರ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಮೂಲದ ವಿಕಾಶ್ ಮತ್ತು ಅವರ ಸಂಬಂಧಿಕರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ತೆರಳಿದ್ದರು. ಸಂಜೆ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಮಿನಿ ಬಸ್ ನಲ್ಲಿ ವಾಪಸ್ಸಾಗುತ್ತಿದ್ದರು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಪುದು ಗ್ರಾಮದ ಸಮೀಪ ಬರುತ್ತಿದ್ದಂತೆ, ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಗೆ ಬಲವಾಗಿ ಡಿಕ್ಕಿ ಹೊಡೆದು ರಸ್ತೆಯ ಮಧ್ಯದಲ್ಲೇ ಪಲ್ಟಿಯಾಗಿದೆ.ಉದ್ಯೋಗ ಅವಕಾಶಗಳು
ಅಪಘಾತದ ರಭಸಕ್ಕೆ ಒಟ್ಟು 9 ಮಂದಿ ಗಾಯಗೊಂಡಿದ್ದು, ಈ ಪೈಕಿ ವಿಕಾಶ್ ಅವರ ಸ್ಥಿತಿ ಗಂಭೀರವಾಗಿತ್ತು. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತೀವ್ರ ರಕ್ತಸ್ರಾವವಾಗಿದ್ದರಿಂದ ವಿಕಾಶ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.




