ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕುಸಿದು ಬಿದ್ದು ಬಾಲಕಿ ಮೃತ್ಯು
ರಾಜ್‌ಕೋಟ್: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತ ಸಂಭವಿಸುತ್ತಿರುವ ಪ್ರಕರಣಗಳು ದೇಶಾದ್ಯಂತ ಆತಂಕ ಮೂಡಿಸುತ್ತಿದ್ದು, ಇದೀಗ ಗುಜರಾತ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಬೇಸಿಗೆ ರಜೆ ಕಳೆಯಲು ಮಾವನ ಮನೆಗೆ ಬಂದಿದ್ದ 14 ವರ್ಷದ ಹದಿಹರೆಯದ ಬಾಲಕಿಯೊಬ್ಬಳು ಊಟದ ನಂತರ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಮೃತ ದುರ್ದೈವಿ ಬಾಲಕಿಯನ್ನು ಗುಜರಾತ್‌ನ ಜಾಮ್‌ನಗರ ನಿವಾಸಿ ಆನಂದಿ ಮೋದಿ (14) ಎಂದು ಗುರುತಿಸಲಾಗಿದೆ. ಈಕೆ ಪವಿತ್ರ ಪುರುಷೋತ್ತಮ ಮಾಸ (ಹೆಚ್ಚುವರಿ ಚಾಂದ್ರಮಾನ ಮಾಸ) ಹಾಗೂ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ರಾಜ್‌ಕೋಟ್‌ನಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದಳು ಎನ್ನಲಾಗಿದೆ.
ಭಾನುವಾರ ಸಂಜೆ ಆನಂದಿ ಮೋದಿ ಕುಟುಂಬಸ್ಥರೊಂದಿಗೆ ರಾಜ್‌ಕೋಟ್‌ನ ಪ್ರಸಿದ್ಧ ರೆಸ್ಟೋರೆಂಟ್‌ವೊಂದಕ್ಕೆ ಭೋಜನಕ್ಕೆ ತೆರಳಿದ್ದಳು. ಎಲ್ಲರೂ ಒಟ್ಟಾಗಿ ಊಟ ಮಾಡಿದ ಬಳಿಕ, ಆನಂದಿ ರೆಸ್ಟೋರೆಂಟ್‌ನ ಆವರಣದಲ್ಲಿ ಇತರ ಮಕ್ಕಳೊಂದಿಗೆ ಆಟವಾಡಲು ನಿರ್ಧರಿಸಿದ್ದಾಳೆ. ಮಕ್ಕಳೆಲ್ಲರೂ ಒಬ್ಬರನ್ನೊಬ್ಬರು ಹಿಡಿಯಲು ಓಡಾಡುತ್ತಾ ಮಜಾ ಮಾಡುತ್ತಿದ್ದರು. ಈ ವೇಳೆ ಓಡುತ್ತಿದ್ದ ಆನಂದಿ ಹಠಾತ್ ಆಗಿ ತನ್ನ ವೇಗವನ್ನು ಕಡಿಮೆ ಮಾಡಿದ್ದಾಳೆ ಮತ್ತು ನೋಡನೋಡುತ್ತಿದ್ದಂತೆಯೇ ನೆಲಕ್ಕೆ ಕುಸಿದು ಬಿದ್ದಿದ್ದಾಳೆ.




