ಭಾರೀ ಗಾಳಿ ಮಳೆಗೆ 3 ಏರ್ ಇಂಡಿಯಾ ವಿಮಾನಗಳು ಜಖಂ
ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಶನಿವಾರ ಬೀಸಿದ ಹಠಾತ್ ಬಲವಾದ ಗಾಳಿ ಮತ್ತು ಭಾರೀ ಮಳೆಗೆ ಮೂರು ಏರ್ ಇಂಡಿಯಾ ವಿಮಾನಗಳು ಜಖಂಗೊಂಡಿವೆ.
ವಿಮಾನ ನಿಲ್ದಾಣದ ರನ್‌ವೇನಲ್ಲಿ ನಿಲ್ಲಿಸಲಾಗಿದ್ದ ಗ್ರೌಂಡ್ ಸಪೋರ್ಟ್ (ನೆಲದ ಬೆಂಬಲ) ಉಪಕರಣಗಳು ಜೋರಾದ ಗಾಳಿಗೆ ಕೊಚ್ಚಿ ಬಂದು ವಿಮಾನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಭಾನುವಾರ ತಿಳಿಸಿದೆ.
ಅಪಘಾತದ ತೀವ್ರತೆಯಿಂದಾಗಿ ಸದ್ಯ ಮೂರೂ ವಿಮಾನಗಳನ್ನು ಕಾರ್ಯಾಚರಣೆಯಿಂದ ತಾತ್ಕಾಲಿಕವಾಗಿ ದೂರ ಇಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕರು ಸ್ಪಷ್ಟಪಡಿಸಿದ್ದಾರೆ.
ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಏರ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗೆ ಸೇರಿದ ಭಾರೀ ನೆಲದ ಉಪಕರಣಗಳು ತಮ್ಮ ನಿಯಂತ್ರಣ ತಪ್ಪಿ ಚಲಿಸಿವೆ.
ಇವು ಟರ್ಮಿನಲ್ 2 ರ ಏಪ್ರನ್ ಭಾಗದಲ್ಲಿ ಪಾರ್ಕ್ ಮಾಡಲಾಗಿದ್ದ ವಿಮಾನಗಳಿಗೆ ಜೋರಾಗಿ ಅಪ್ಪಳಿಸಿವೆ. ಆದರೆ, ಹವಾಮಾನದಲ್ಲಿ ಇಷ್ಟೊಂದು ಭೀಕರ ಬದಲಾವಣೆಯಾಗುವ ಕುರಿತು ವಾಯು ಸಂಚಾರ ನಿಯಂತ್ರಣ (ATC) ವಿಭಾಗವು ವಿಮಾನ ನಿಲ್ದಾಣ ನಿರ್ವಾಹಕರಿಗಾಗಲಿ ಅಥವಾ ವಿಮಾನಯಾನ ಸಂಸ್ಥೆಗಳಿಗಾಗಲಿ ಯಾವುದೇ ಮುಂಜಾಗ್ರತಾ ಎಚ್ಚರಿಕೆ ನೀಡಿರಲಿಲ್ಲ ಎಂದು ಖಾಸಗಿ ನಿರ್ವಾಹಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.




