June 6, 2026

ಸುಳ್ಯ: ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಆರೋಪಿಗೆ ಜೈಲು ಶಿಕ್ಷೆ ಪ್ರಕಟ

0
image_editor_output_image1793422141-1780725794582.jpg

ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಹಾಗೂ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಎರಡು ಪ್ರತ್ಯೇಕ ಗಂಭೀರ ಪ್ರಕರಣಗಳ ವಿಚಾರಣೆ ನಡೆಸಿದ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಸುಳ್ಯದ ಅಜ್ಜಾವರ ನಿವಾಸಿ ಎ.ಎಂ. ಅಜೀಜ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.

ಅಪರಾಧಿ ಎ.ಎಂ. ಅಜೀಜ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ 2006ರಲ್ಲಿ ರಾತ್ರಿ ವೇಳೆ ಮನೆಗನ್ನ ಹಾಕಿ ಕಳ್ಳತನ ನಡೆಸಿದ ಆರೋಪದಡಿ ಅಪರಾಧ ಕ್ರಮಾಂಕ (ಅ.ಕ್ರ) 96/2006, ಐಪಿಸಿ ಕಲಂ 457 ಮತ್ತು 380 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದರೊಂದಿಗೆ, 2018ರಲ್ಲಿ ಈತ ಕಾನೂನುಬದ್ಧ ಪೊಲೀಸ್ ಕಾವಲಿನಿಂದ ತಪ್ಪಿಸಿಕೊಂಡು ಓಡಿಹೋದ ಆರೋಪದ ಮೇಲೆ ಸುಳ್ಯ ಠಾಣೆಯಲ್ಲೇ ಮತ್ತೊಂದು ಪ್ರಕರಣ ಅ.ಕ್ರ 103/2018, ಐಪಿಸಿ ಕಲಂ 224 ರ ಅಡಿಯಲ್ಲಿ ದಾಖಲಾಗಿತ್ತು. ಪೊಲೀಸರು ಈ ಎರಡೂ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಎರಡು ಪ್ರಕರಣಗಳ ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ದಮಯಂತಿಯವರು, ಆರೋಪಿಯ ಮೇಲಿನ ಎಲ್ಲಾ ಡಿಜಿಟಲ್ ಹಾಗೂ ಸಾಂದರ್ಭಿಕ ಸಾಕ್ಷ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ ಪೊಲೀಸ್ ಕಾವಲಿನಿಂದ ತಪ್ಪಿಸಿಕೊಂಡ ಪ್ರಕರಣ (ಅ.ಕ್ರ: 103/2018): ಐಪಿಸಿ ಕಲಂ 224ರ ಅಡಿಯಲ್ಲಿ ಆರೋಪಿಗೆ 1 ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಲಾಗಿದೆ.

ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ.
ಮನೆಗಳ್ಳತನ ಪ್ರಕರಣ (ಅ.ಕ್ರ: 96/2006): ಈ ಪ್ರಕರಣದ ಐಪಿಸಿ ಕಲಂ 457ರ ಅಡಿಯಲ್ಲಿ 3 ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ₹5,000 ದಂಡ (ದಂಡ ಕಟ್ಟದಿದ್ದರೆ 45 ದಿನ ಹೆಚ್ಚುವರಿ ಜೈಲು) ಹಾಗೂ ಕಲಂ 380ರ ಅಡಿಯಲ್ಲಿ ಮತ್ತೊಂದು 3 ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!