ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಾಪತ್ತೆ
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ದಯಾರ ಬುಗ್ಯಾಲ್‌ನಲ್ಲಿ ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿರುವ ಎಂಬಿಎ ವಿದ್ಯಾರ್ಥಿನಿಯ ಸುಳಿವು ವಾರವಾದರೂ ದೊರೆತಿಲ್ಲ.
ನೈನಿತಾಲ್ ನಿವಾಸಿ ಬಬಿತಾ ಪಾಂಡೆ ನಾಪತ್ತೆಯಾದ ವಿದ್ಯಾರ್ಥಿನಿ. ಬಬಿತಾ ಪಾಂಡೆ ಅವರು ಉತ್ತರಾಖಂಡದ ಉಧಮ್ ಸಿಂಗ್ ನಗರದ ಹರ್ಮನ್‌ಪಾಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಶಹಜಹಾನ್‌ಪುರದ ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಉತ್ತರಕಾಶಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು.
ಟ್ರೆಕ್ಕಿಂಗ್ ವೇಳೆ ಬಬಿತಾ ಪಾಂಡೆ ನಾಪತ್ತೆಯಾಗಿದ್ದು, ಈ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದಾರೆ. ದೂರಿನ ಅನ್ವಯ ಯುವತಿಯ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೂವರು ಮೇ 25 ರಂದು ಡೆಹ್ರಾಡೂನ್‌ಗೆ ತೆರಳಿದ್ದರು. ನಂತರ ಹರ್ಸಿಲ್, ಗಂಗೋತ್ರಿ ಮತ್ತು ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಬಳಿಕ ಮೂವರು ಮೇ 28 ರಂದು ರೈಥಾಲ್ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದರು. ಅವರು ಕೊನೆಯದಾಗಿ ಓಡಾಡಿದ ದೃಶ್ಯ ರೈಥಾಲ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ಉಪಾಧ್ಯಾಯ ತಿಳಿಸಿದ್ದಾರೆ.
ಒಂದು ದಿನದ ನಂತರ ರೈಥಾಲ್‌ನಿಂದ ಉತ್ತರಾಖಂಡದ ಜನಪ್ರಿಯ ಟ್ರೆಕ್ಕಿಂಗ್ ಪ್ರದೇಶವಾದ ದಯಾರಾ ಬುಗ್ಯಾಲ್‌ಗೆ ನಡಿಗೆ ಪ್ರಾರಂಭಿಸಿದ್ದರು. ರಾತ್ರಿ ಗೋಯಿ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದರು. ಮಧ್ಯರಾತ್ರಿಯ ಸುಮಾರಿಗೆ, ಪಾಂಡೆ ಶಿಬಿರದಿಂದ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಅವರ ಪತ್ತೆಗಾಗಿ ಸೇನೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ರಾಜ್ಯ ವಿಪತ್ತು ರಕ್ಷಣಾ ಪಡೆ, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ, ಪೊಲೀಸರು, ಅರಣ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣೆಯ ಸಿಬ್ಬಂದಿಯನ್ನು ಒಳಗೊಂಡ 150 ಸದಸ್ಯರ ತಂಡ ಶೋಧ ಕಾರ್ಯ ನಡೆಸುತ್ತಿದೆ.





