May 18, 2026

ಮೂಡುಬಿದಿರೆ: ಕಲ್ಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ರಸ್ತೆಯಲ್ಲೇ ಪಲ್ಟಿ

0
image_editor_output_image1868656517-1779092241356.jpg

ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಎಂಬಲ್ಲಿ ಕಲ್ಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾದ ಘಟನೆ ಸೋಮವಾರ (ಮೇ 18) ನಡೆದಿದೆ.

ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಬೃಹತ್ ಕಲ್ಲುಗಳು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹರಡಿಕೊಂಡಿದ್ದವು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ಪರದಾಡುವಂತಾಯಿತು ಮತ್ತು ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ವ್ಯತ್ಯಯಗೊಂಡಿತು.

ಹೆಚ್ಚಿದ ಸಾರ್ವಜನಿಕ ಆಕ್ರೋಶ: ಕಳೆದ ಕೆಲವು ದಿನಗಳಿಂದ ಬನ್ನಡ್ಕದ ಈ ನಿರ್ದಿಷ್ಟ ವಲಯದಲ್ಲಿ ನಿರಂತರವಾಗಿ ಸರಣಿ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ರಸ್ತೆ ಅಕ್ಷರಶಃ ‘ಡೆತ್ ಝೋನ್’ ಆಗಿ ಮಾರ್ಪಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಈ ಅಪಾಯಕಾರಿ ರಸ್ತೆ ತಿರುವುಗಳ ಬಗ್ಗೆ ಮತ್ತು ತಾಂತ್ರಿಕ ದೋಷಗಳ ಬಗ್ಗೆ ಸ್ಥಳೀಯರು ಹಾಗೂ ವಾಹನ ಸವಾರರು ಸ್ಥಳೀಯ ಶಾಸಕರು ಮತ್ತು ಸಂಸದರ ಗಮನಕ್ಕೆ ತಂದು ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆಯ ದೋಷಗಳನ್ನು ಸರಿಪಡಿಸಿ, ಸೂಕ್ತ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!