May 18, 2026

ಬೆಳ್ತಂಗಡಿ: ಕಾರು, ಬೈಕ್ ನಡುವೆ ಅಪಘಾತ: ಮಹಿಳೆ ಸ್ಥಳದಲ್ಲೇ ಮೃತ್ಯು

0
image_editor_output_image-1343807174-1779092577161.jpg

ಬೆಳ್ತಂಗಡಿ: ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಬಳಿ ಭಾನುವಾರ ರಾತ್ರಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ತೀವ್ರವಾಗಿ ಗಾಯಗೊಂಡಿದ್ದು, ಪುತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ‘ಬಳಂಜ ಫಾರ್ಮ್’ ಮಾಲೀಕ ಹಾಗೂ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಗಂಭೀರವಾಗಿ ಗಾಯಗೊಂಡಿರುವ ಅನಿಲ್ ಭಟ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಿಲ್ ಭಟ್ ಮತ್ತು ಪತ್ನಿ ಶೈಲಜಾ ಅವರು ತಮ್ಮ ಫಾರ್ಮ್‌ನ ಕೆಲಸ ಮುಗಿಸಿ, ಮಗನೊಂದಿಗೆ ಬೈಕ್‌ನಲ್ಲಿ ಸೈಟ್ ಕಡೆಗೆ ತೆರಳುತ್ತಿದ್ದರು. ಕನ್ನಡಿಕಟ್ಟೆ ಬಳಿ ತಲುಪುತ್ತಿದ್ದಂತೆ ಇವರ ಬೈಕ್ ಹಾಗೂ ಎದುರಿನಿಂದ ಬಂದ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಶೈಲಜಾ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!