ಮಂಗಳೂರು: ಖಾಸಗಿ ಬಸ್ ಚಾಲಕನಿಗೆ ಹೃದಯಾಘಾತ: ನಿಯಂತ್ರಣ ತಪ್ಪಿ ಬಸ್ ಪಲ್ಟಿ- ಚಾಲಕ ಮೃತ್ಯು
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ಖಾಸಗಿ ಬಸ್‌ನ ಚಾಲಕನಿಗೆ ಚಾಲನೆ ಮಾಡುತ್ತಿರುವಾಗಲೇ ತೀವ್ರ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಗುದ್ದಿ ನಿಂತಿದ್ದರಿಂದ ಭೀಕರ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
‘ಪೂರ್ಣಿಮಾ ಟ್ರಾವೆಲ್ಸ್’ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ತಾಳತ್ ಮನೆ ಸಮೀಪ ತಲುಪುತ್ತಿದ್ದಂತೆ ಚಾಲಕನಿಗೆ ಅಕಸ್ಮಾತ್ ಆಗಿ ಎದೆನೋವು ಕಾಣಿಸಿಕೊಂಡಿದೆ. ಹೃದಯಾಘಾತ ಸಂಭವಿಸಿದ ಪರಿಣಾಮ ಚಾಲಕ ಸೀಟಿನಲ್ಲೇ ಕುಸಿದು ಬಿದ್ದಿದ್ದಾರೆ. ಚಾಲಕನ ನಿಯಂತ್ರಣವಿಲ್ಲದೆ ಬಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಾಗಿ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದೆ.
ಈ ಭಾಗವು ಗುಡ್ಡಗಾಡು ಪ್ರದೇಶವಾಗಿದ್ದು, ರಸ್ತೆಯ ಒಂದು ಬದಿಯಲ್ಲಿ ಆಳವಾದ ಪ್ರಪಾತವಿದೆ. ಒಂದು ವೇಳೆ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದರೆ ಭೀಕರ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಬಸ್ ದಿಣ್ಣೆಗೆ ಗುದ್ದಿ ನಿಂತಿದ್ದರಿಂದ ಒಳಗಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆಯಿಂದ ಗಾಬರಿಗೊಂಡ ಪ್ರಯಾಣಿಕರು ತಕ್ಷಣವೇ ಬಸ್ಸಿನಿಂದ ಕೆಳಗಿಳಿದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.





