May 8, 2026

ಬಂಟ್ವಾಳ: ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ, ನಗದು ದೋಚಿ ಕಳ್ಳತನ

0
n71142992117782209302086d31350066261b77aaf86af13dc42dcdb13039aad24404d833b60054430161d6.jpg

ಬಂಟ್ವಾಳ: ಇಲ್ಲಿನ ಪಚ್ಚಿನಡ್ಕ ಸಮೀಪದ ಗೋರೆಮಾರ್ ನಿವಾಸಿ ಪ್ರಕಾಶ್ ಎಂಬುವವರ ಮನೆಯ ಮುಂಭಾಗದ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು, ಚಿನ್ನಾಭರಣ, ನಗದು ಹಾಗೂ ಬೆಳ್ಳಿ ವಿಗ್ರಹವನ್ನು ದೋಚಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.

ಮನೆಯ ಕಪಾಟಿನ ಲಾಕರ್‌ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಮೂರು ಜೋಡಿ ಚಿನ್ನದ ಓಲೆಗಳು ಮತ್ತು ಸುಮಾರು 18 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳನ್ನು ಕಳ್ಳರು ದೋಚಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 4.13 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದರೊಂದಿಗೆ 65,000 ರೂ. ನಗದು ಹಣವನ್ನೂ ಕಳ್ಳರು ಕದ್ದಿರುವುದಾಗಿ ದೂರು ದಾಖಲಿಸಲಾಗಿದೆ.

ಜೊತೆಗೆ ಮನೆಯ ದೇವರ ಕೋಣೆಯಲ್ಲಿದ್ದ ಸುಮಾರು 20,000 ರೂ. ಮೌಲ್ಯದ ಕೃಷ್ಣನ ಬೆಳ್ಳಿ ವಿಗ್ರಹ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 5,000 ರೂ. ಹಣವನ್ನು ಕಳ್ಳರು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.

ಮನೆಯ ಮಾಲೀಕ ಪ್ರಕಾಶ್ ಕೇರಳದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು. ಶಾಲೆಗಳಿಗೆ ರಜೆ ಇದ್ದ ಕಾರಣ ಅವರ ಪತ್ನಿ ಮತ್ತು ಮಕ್ಕಳು ಶಿವಮೊಗ್ಗಕ್ಕೆ ತೆರಳಿದ್ದರು. ಗುರುವಾರ ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ಮನೆಯವರಿಗೆ ಮಾಹಿತಿ ನೀಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಬಂಟ್ವಾಳ ನಗರ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!