April 29, 2026

ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳ ಬಳಿ ಯಾವುದೇ ಯೋಜನೆಗಳಿಲ್ಲ: ಎಂ.ಕೆ. ಫೈಝಿ

0
image_editor_output_image1468692823-1777451369762.jpg

ಮಂಗಳೂರು: “ದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಬಳಸುತ್ತಿರುವ ಜನವಿರೋಧಿ ತಂತ್ರಗಳನ್ನು ಎದುರಿಸಲು ಅಥವಾ ಅವರನ್ನು ಸೋಲಿಸಲು ಕಾಂಗ್ರೆಸ್ ಸೇರಿದಂತೆ ಯಾವುದೇ ವಿರೋಧ ಪಕ್ಷಗಳ ಬಳಿ ಸ್ಪಷ್ಟವಾದ ಯೋಜನೆಗಳಿಲ್ಲ,” ಎಂದು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಹೇಳಿದರು.

ನಗರದ ಇಂಡಿಯಾನ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳವಾರ (ಏಪ್ರಿಲ್ 28) ನಡೆದ ‘ಲೀಡರ್ಸ್ ಕಾನ್ಕ್ಲೇವ್’ ಅನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ತಮ್ಮ ಭಾಷಣದಲ್ಲಿ ಬಿಜೆಪಿಯ ಆಡಳಿತ ವೈಖರಿಯನ್ನು ವಿಮರ್ಶಿಸಿದ ಅವರು, ಬಿಜೆಪಿ ಅಧಿಕಾರ ಹಿಡಿಯಲು ಮೂರು ಹಂತದ ಕೆಲಸಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು:

1.*ಮುಸ್ಲಿಂ ವಿರೋಧಿ ನಿಲುವು:* ನಿರಂತರವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿ ರಾಜಕೀಯ ಲಾಭ ಪಡೆಯುವುದು.
2. *ಆರ್ಥಿಕತೆಯ ದುರ್ಬಳಕೆ:* ದೇಶದ ಸಂಪತ್ತನ್ನು ಬಳಸಿಕೊಂಡು ರಾಜಕೀಯ ಅಧಿಪತ್ಯ ಸ್ಥಾಪಿಸುವುದು.
3. *ತನಿಖಾ ಏಜೆನ್ಸಿಗಳ ದುರುಪಯೋಗ:* ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಧ್ವನಿಗಳನ್ನು ಹತ್ತಿಕ್ಕುವುದು.

“ಕಾಂಗ್ರೆಸ್, ಸಮಾಜವಾದಿ ಪಕ್ಷ ಅಥವಾ ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷಗಳು ಕೇವಲ ಚುನಾವಣೆ ಬಂದಾಗ ಮಾತ್ರ ಮೈತ್ರಿ ಮಾಡಿಕೊಳ್ಳುತ್ತವೆ. ಬಿಜೆಪಿಯ ಸಂವಿಧಾನ ವಿರೋಧಿ ಕಾನೂನುಗಳ ವಿರುದ್ಧ ಈ ಪಕ್ಷಗಳು ಧ್ವನಿ ಎತ್ತುತ್ತಿಲ್ಲ. ಅಧಿಕಾರದ ಆಸೆಗಾಗಿ ಈ ಪಕ್ಷಗಳ ನಾಯಕರು ಯಾವುದೇ ಲಜ್ಜೆ ಇಲ್ಲದೆ ಬಿಜೆಪಿ ಸೇರುತ್ತಿದ್ದಾರೆ. ಮುಸ್ಲಿಮರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವ ಕಾಂಗ್ರೆಸ್, ಅವರಿಗೆ ಸಮಸ್ಯೆ ಎದುರಾದಾಗ ಚಕಾರವೆತ್ತುವುದಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ದೇಶದಲ್ಲಿ ಅಲ್ಪಸಂಖ್ಯಾತರು ಇಂದು ತಮ್ಮ ಶಕ್ತಿಯನ್ನು ಅರಿತುಕೊಂಡಿದ್ದಾರೆ. ಸಂಸತ್ತಿಗೆ ಹೋಗಲು ಸಂಸದರೇ ಭಯಪಡುವಂತಹ ವಾತಾವರಣ ಇರುವಾಗಲೂ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎಸ್‌ಡಿಪಿಐ ಭದ್ರವಾಗಿ ನೆಲೆಯೂರುತ್ತಿದೆ. ಇಂದು ನಮ್ಮ ಪಕ್ಷವು ದೇಶದ ಮೂರನೇ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬೆಳೆಯುತ್ತಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಕೇವಲ ಚುನಾವಣಾ ಮೈತ್ರಿ ಸಾಕಾಗದು, ಅದಕ್ಕೆ ಗಟ್ಟಿಯಾದ ಜನಪರ ಯೋಜನೆಗಳು ಬೇಕು. ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿ ಕೇವಲ ಎಸ್‌ಡಿಪಿಐಗೆ ಮಾತ್ರವಲ್ಲ ಇರುವುದು ಇದು ಎಲ್ಲಾ ವಿರೋಧ ಪಕ್ಷಗಳ ಸಾಂಘಿಕ ಹೊಣೆಗಾರಿಕೆಯಾಗಿದೆ,” ಎಂದರು

ತಮ್ಮ ಭಾಷಣದಲ್ಲಿ ‘ಸಕಾರಾತ್ಮಕ ರಾಜಕಾರಣ’ದ (Positive Politics) ಆಳವಾದ ಅರ್ಥವನ್ನು ವಿವರಿಸಿದ ಅವರು, ರಾಜಕೀಯವೆಂದರೆ ಕೇವಲ ಪರಸ್ಪರ ಟೀಕೆ ಮಾಡುವುದು ಅಥವಾ ಅಧಿಕಾರವನ್ನು ಕಬಳಿಸುವುದಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದರು.
ನಿಜವಾದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ, ಕೇವಲ ಕಾಗದದ ಮೇಲಿರುವ ಅಂಕಿ-ಅಂಶಗಳು ದೇಶದ ಪ್ರಗತಿಯನ್ನು ಅಳೆಯಲಾರವು ಎಂದು ಪ್ರತಿಪಾದಿಸಿದರು. ಶಿಕ್ಷಣ, ಉದ್ಯೋಗ ಮತ್ತು ಸುಸಜ್ಜಿತ ಆರೋಗ್ಯ ಸೇವೆಗಳು ಸಮಾಜದ ಅತ್ಯಂತ ಕೆಳಹಂತದ ವ್ಯಕ್ತಿಗೂ ತಲುಪಿದಾಗ ಮಾತ್ರ ಅದನ್ನು ನೈಜ ಅಭಿವೃದ್ಧಿ ಎಂದು ಕರೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಭಯ ಮತ್ತು ದ್ವೇಷದ ಆಧಾರದ ಮೇಲೆ ನಡೆಯುವ ರಾಜಕಾರಣಕ್ಕೆ ಪರ್ಯಾಯವಾಗಿ ಪ್ರೀತಿ, ನ್ಯಾಯ ಮತ್ತು ಸಂವಿಧಾನ ನೀಡಿದ ಹಕ್ಕುಗಳಿಗಾಗಿ ಹೋರಾಡುವುದೇ ಸಕಾರಾತ್ಮಕ ರಾಜಕಾರಣದ ಮೂಲತತ್ವ ಎಂದರು. ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ಕೇವಲ ಚುನಾವಣಾ ಕಾಲದ ‘ಮತಬ್ಯಾಂಕ್’ ಆಗಿ ಉಳಿಯಬಾರದು; ಬದಲಾಗಿ ಅವರು ವ್ಯವಸ್ಥೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!