April 29, 2026

ಸೋಷಿಯಲ್ ಮೀಡಿಯಾದ ಮನಸ್ಸು ಗೆದ್ದ ಡೆಲಿವರಿ ಬಾಯ್ ಅಮ್ಜದ್:

0
image_editor_output_image890986328-1777451767407.jpg

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಎಂಬುದು ಅಪರೂಪದ ವಿಚಾರಗಳಾಗಿವೆ. ಅಮ್ಜದ್ ಎಂಬ ಡೆಲಿವರಿ ಬಾಯ್ ಮಾಡಿರುವ ಕೆಲಸ ಈಗ ಇಡೀ ಸೋಷಿಯಲ್ ಮೀಡಿಯಾದ ಮನಸ್ಸು ಗೆದ್ದಿದೆ.

ಮನೆಯ ಮಾಲೀಕರು ಮರೆತು ಬಾಗಿಲು ತೆರೆದಿಟ್ಟು ಹೋದಾಗ, ಕೇವಲ ಪಾರ್ಸೆಲ್ ತಲುಪಿಸುವುದಷ್ಟೇ ತನ್ನ ಕೆಲಸ ಎಂದುಕೊಳ್ಳದ ಈತ, ಕಾವಲುಗಾರನಂತೆ ನಿಂತು ಮನೆ ಕಾಯುವ ಮೂಲಕ ಸುದ್ದಿಯಾಗಿದ್ದಾರೆ.’ ದಿವ್ಯ ಉನ್ನಿ ಎಂಬ ಮಹಿಳೆ ಆಕಸ್ಮಿಕವಾಗಿ ತಮ್ಮ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡದೆ ಹೊರಗೆ ಹೋಗಿದ್ದರು. ಈ ವೇಳೆ ‘ಡೆಲಿವರಿ’ ಕಂಪನಿಯ ಅಮ್ಜದ್ ಅನ್ಸಾರಿ ಎಂಬ ಡೆಲಿವರಿ ಏಜೆಂಟ್ ಪಾರ್ಸೆಲ್ ನೀಡಲು ಅಲ್ಲಿಗೆ ಬಂದಿದ್ದಾರೆ. ಮನೆ ಬಾಗಿಲು ತೆರೆದಿರುವುದನ್ನು ಮತ್ತು ಮನೆಯೊಳಗೆ ಯಾರೂ ಇಲ್ಲದಿರುವುದನ್ನು ಅವರು ಗಮನಿಸಿದರು.

ಸಾಮಾನ್ಯವಾಗಿ ಅಂತಹ ಸಂದರ್ಭದಲ್ಲಿ ಪಾರ್ಸೆಲ್ ಅನ್ನು ಹೊರಗೆ ಇಟ್ಟು ಹೋಗುವುದು ವಾಡಿಕೆ. ಆದರೆ ಅಮ್ಜದ್ ಹಾಗೆ ಮಾಡಲಿಲ್ಲ. ಮನೆಯೊಳಗೆ ಒಂದು ಬೆಕ್ಕು ಇರುವುದನ್ನು ಅವರು ಗಮನಿಸಿದರು. ಬಾಗಿಲು ತೆರೆದಿದ್ದರೆ ಬೆಕ್ಕು ಹೊರಗೆ ಓಡಿಹೋಗಬಹುದು ಅಥವಾ ಅಪರಿಚಿತರು ಯಾರಾದರೂ ಒಳಗೆ ನುಗ್ಗಬಹುದು ಎಂದು ಆಲೋಚಿಸಿದ ಅವರು, ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯೊಳಗಿನ ಟೇಬಲ್ ಮೇಲೆ ಇಟ್ಟು, ಮಾಲೀಕರು ಬರುವವರೆಗೂ ಬಾಗಿಲ ಬಳಿಯೇ ಕಾವಲು ನಿಂತರು.

ತಕ್ಷಣವೇ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ ಅಮ್ಜದ್, ಅವರು ಮನೆಗೆ ವಾಪಸ್ ಬರುವವರೆಗೂ ಸುಮಾರು ಹೊತ್ತು ಮನೆಯ ಹೊರಗೇ ನಿಂತು ರಕ್ಷಣೆ ನೀಡಿದರು. ದಿವ್ಯ ಅವರು ಮನೆಗೆ ಬಂದಾಗ ಅಮ್ಜದ್ ಅವರ ಈ ಜವಾಬ್ದಾರಿಯುತ ವರ್ತನೆ ಕಂಡು ಆಶ್ಚರ್ಯಚಕಿತರಾದರು ಮತ್ತು ಭಾವುಕರಾದರು.

ದಿವ್ಯ ಉನ್ನಿ ಅವರು ಈ ಇಡೀ ಘಟನೆಯನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ನಾನು ಮರೆತು ಬಾಗಿಲು ತೆರೆದಿಟ್ಟು ಹೋಗಿದ್ದೆ. ನನ್ನ ಬೆಕ್ಕು ಹೊರಗೆ ಓಡಿ ಹೋಗದಂತೆ ಮತ್ತು ಮನೆಯನ್ನು ಕಾಯುವ ಮೂಲಕ ಅಮ್ಜದ್ ಪ್ರಾಮಾಣಿಕತೆ ಮೆರೆದಿದ್ದಾರೆ. ಡೆಲಿವರಿ ಕಂಪನಿ ಇಂತಹ ಉದ್ಯೋಗಿಗೆ ಹೆಚ್ಚಿನ ಬಡ್ತಿ ಮತ್ತು ಸಂಬಳ ನೀಡಬೇಕು. ಇಂತಹ ಮನುಷ್ಯರು ಇರುವುದರಿಂದಲೇ ಈ ಜಗತ್ತು ಸುಂದರವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!