ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಿಗೂಢ ನಾಪತ್ತೆ: ಸಿಐಡಿ ತನಿಖೆಗೆ ಒಪ್ಪಿಸಿದ ರಾಜ್ಯ ಸರ್ಕಾರ
ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ನಿಗೂಢ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಸಿಐಡಿ ತನಿಖೆಗೆ ಒಪ್ಪಿಸಿದೆ.
ಘಟನೆ ನಡೆದು ಎಂಟು ತಿಂಗಳು ಕಳೆದರೂ ನಾಪತ್ತೆಯಾದ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸರ ತನಿಖೆಯ ಪ್ರಗತಿಯಿಂದ ಅಸಮಾಧಾನಗೊಂಡ ಪೋಷಕರ ಮನವಿಗೆ ಸ್ಪಂದಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.Maps
ವಿದ್ಯಾರಣ್ಯಪುರ ನಿವಾಸಿಗಳಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ಕಳೆದ ಜನವರಿ 31 ರಂದು ನಿಗೂಢವಾಗಿ ಕಣ್ಮರೆಯಾಗಿದ್ದರು.
ಅಂದು ಎಂದಿನಂತೆ ಮನೆಯಿಂದ ಹೊರಟಿದ್ದ ಈ ಇಬ್ಬರು ವಿದ್ಯಾರ್ಥಿನಿಯರು ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನಿಂದ ಈವರೆಗೂ ವಿದ್ಯಾರ್ಥಿನಿಯರ ಪತ್ತೆಗಾಗಿ ಪೊಲೀಸರು ನಡೆಸಿದ ಸತತ ಪ್ರಯತ್ನಗಳು ಫಲ ನೀಡಿಲ್ಲ.
ಈ ಪ್ರಕರಣದಲ್ಲಿ ಪೊಲೀಸರಿಗೆ ಎದುರಾದ ಅತಿದೊಡ್ಡ ಸವಾಲೆಂದರೆ ವಿದ್ಯಾರ್ಥಿನಿಯರು ಯಾವುದೇ ತಾಂತ್ರಿಕ ಕುರುಹುಗಳನ್ನು ಬಿಟ್ಟು ಹೋಗದಿರುವುದು. ತನಿಖೆಯ ವೇಳೆ ಅವರು ಯಾವುದೇ ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್‌ಗಳನ್ನು ಬಳಸುತ್ತಿಲ್ಲ ಎಂಬುದು ದೃಢಪಟ್ಟಿದೆ.
ಆದರೂ, ಅವರು ಹೋಗುವಾಗ ತಮ್ಮ ಆಧಾರ್ ಕಾರ್ಡ್‌ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಎಂಟು ತಿಂಗಳಿನಿಂದ ಅವರು ತಮ್ಮ ಕುಟುಂಬದ ಸದಸ್ಯರನ್ನಾಗಲಿ ಅಥವಾ ಸ್ನೇಹಿತರನ್ನಾಗಲಿ ಯಾವುದೇ ರೀತಿಯಲ್ಲಿ ಸಂಪರ್ಕಿಸಿಲ್ಲದಿರುವುದು ತನಿಖಾ ಸಂಸ್ಥೆಗಳನ್ನು ದಿಕ್ಕುಗಾಣಿಸಿದೆ.





