ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವ ಅಗತ್ಯವಿಲ್ಲ, ಈಗಾಗಲೇ ಹಿಂದೂ ರಾಷ್ಟ್ರ ಆಗಿದೆ: RSS ಮುಖ್ಯಸ್ಥ ಮೋಹನ್ ಭಾಗವತ್
ನಾಗುರ: ‘ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಪ್ರತ್ಯೇಕವಾಗಿ ಘೋಷಿಸುವ ಅಗತ್ಯವಿಲ್ಲ. ಈಗಾಗಲೇ ಅದು ಹಿಂದೂ ರಾಷ್ಟ್ರವಾಗಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸಿದ ವ್ಯಕ್ತಿಗಳನ್ನು ಗೌರವಿಸಲು ಸೋಮವಾರ ಇಲ್ಲಿನ ರೇಷ್ಮೆಬಾಗ್‌ನಲ್ಲಿ ಡಾ. ಹೆಡ್ಡೆವಾರ್ ಸ್ಮಾರಕ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಅಯೋಧ್ಯೆಯ ರಾಮಮಂದಿರವು ಅಧಿಕಾರದಲ್ಲಿರುವವರ ಬದ್ಧತೆ ಮತ್ತು ದೇಶದ ಪ್ರತಿಯೊಬ್ಬರ ಬೆಂಬಲದಿಂದ ನಿರ್ಮಾಣಗೊಂಡಿದೆ’ ಎಂದಿದ್ದಾರೆ.
‘ಒಂದು ಕಾಲದಲ್ಲಿ ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ರಾಮಮಂದಿರ ನಿರ್ಮಾಣವಾಗುವವರೆಗೆ ಜನರು ಈ ಹೇಳಿಕೆಯನ್ನು ನೋಡಿ ನಗುತ್ತಿದ್ದರು. ಇಂದು ಅದೇ ಜನರು ಭಾರತವು ಹಿಂದೂಗಳ ಭೂಮಿ ಎಂದು ಹೇಳುತ್ತಿದ್ದಾರೆ’ ಎಂದಿದ್ದಾರೆ





