ಅನಾರೋಗ್ಯ ಪೀಡಿತ ಪ್ರಯಾಣಿಕನಿಗೆ ಸೀಟು ನೀಡಲು ನಿರಾಕರಣೆ: ಕೆಎಸ್‌ಆರ್‌ಟಿಸಿ ಸಂಸ್ಥೆಗೆ 30000 ರೂ. ದಂಡ
ಮಲಪ್ಪುರಂ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅನಾರೋಗ್ಯ ಪೀಡಿತ ಪ್ರಯಾಣಿಕರೊಬ್ಬರಿಗೆ ಸೀಟು ನೀಡಲು ನಿರಾಕರಿಸಿದ ಮತ್ತು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಕಾರಣಕ್ಕಾಗಿ ಜಿಲ್ಲಾ ಗ್ರಾಹಕ ಆಯೋಗವು 30,000 ರೂ ದಂಡ ವಿಧಿಸಿದೆ.
ಮಲಪ್ಪುರಂ ಮೂಲದ ಮೊಹಮ್ಮದ್ ಜೈನುದ್ದೀನ್ ಕೋರ್ಮತ್ ಎಂಬುವವರು ಇತ್ತೀಚೆಗೆ ತ್ರಿಶೂರ್‌ನ ಅಂಬಲ್ಲೂರ್‌ನಿಂದ ಮಲಪ್ಪುರಂನ ಕೊಳಪ್ಪುರಂಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಹತ್ತಿದಾಗ ಸೀಟುಗಳು ಖಾಲಿ ಇರಲಿಲ್ಲ. ತಮಗೆ ಆರೋಗ್ಯ ಸರಿಯಿಲ್ಲದ ಕಾರಣ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ ಎಂದು ಅವರು ಬಸ್ ನಿರ್ವಾಹಕನಿಗೆ ತಿಳಿಸಿದ್ದರು. ತ್ರಿಶೂರ್ ತಲುಪಿದ ನಂತರ ಸೀಟು ಕೊಡಿಸುವುದಾಗಿ ನಿರ್ವಾಹಕರು ಭರವಸೆ ನೀಡಿದ್ದರು.
ತ್ರಿಶೂರ್‌ನಲ್ಲಿ ಕೆಲವು ಸೀಟುಗಳು ಖಾಲಿಯಾದಾಗ ಜೈನುದ್ದೀನ್ ಅವರು ಸೀಟೊಂದರಲ್ಲಿ ಕುಳಿತರು. ಆದರೆ, ಸ್ವಲ್ಪ ಸಮಯದ ನಂತರ ಆ ಸೀಟು ಮೊದಲೇ ಕಾಯ್ದಿರಿಸಲ್ಪಟ್ಟಿದೆ ಎಂದು ಹೇಳಿ ನಿರ್ವಾಹಕರು ಅವರನ್ನು ಎಬ್ಬಿಸಿದರು. ಬೇರೆ ಸೀಟು ಇಲ್ಲದ ಕಾರಣ ಅನಿವಾರ್ಯವಾಗಿ ಅವರು ಇಡೀ ಪ್ರಯಾಣವನ್ನು ನಿಂತುಕೊಂಡೇ ಮಾಡಬೇಕಾಯಿತು.
ಅಷ್ಟೇ ಅಲ್ಲದೆ, ಜೈನುದ್ದೀನ್ ಅವರು ಇಳಿಯಬೇಕಿದ್ದ ‘ಕಾಕ್ಕಾಡ್’ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ. ಬದಲಾಗಿ ಸರ್ವಿಸ್ ರಸ್ತೆಗೆ ಹೋಗದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಾಗಿ ಮುಂದಿನ ನಿಲ್ದಾಣದಲ್ಲಿ ಅವರನ್ನು ಇಳಿಸಲಾಯಿತು. ಇದರಿಂದ ಅವರು ಮತ್ತಷ್ಟು ತೊಂದರೆ ಅನುಭವಿಸಬೇಕಾಯಿತು. ಈ ಬಗ್ಗೆ ಜೈನುದ್ದೀನ್ ಅವರು ಮಲಪ್ಪುರಂ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.
ಪ್ರಯಾಣಿಕರಿಗೆ ಕಾಯ್ದಿರಿಸಿದ ಸೀಟುಗಳ ಬಗ್ಗೆ ಮೊದಲೇ ಮಾಹಿತಿ ನೀಡದಿರುವುದು ಮತ್ತು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದಿರುವುದು “ಸೇವೆಯಲ್ಲಿನ ನ್ಯೂನತೆ” ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಆದ ತೊಂದರೆಗೆ ಪರಿಹಾರವಾಗಿ 25,000 ರೂ ಮತ್ತು ಕಾನೂನು ಹೋರಾಟದ ವೆಚ್ಚವಾಗಿ 5,000 ರೂ ಸೇರಿ ಒಟ್ಟು 30,000 ರೂ ಅನ್ನು 45 ದಿನಗಳೊಳಗೆ ಪಾವತಿಸಲು ಕೆಎಸ್‌ಆರ್‌ಟಿಸಿಗೆ ಸೂಚಿಸಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಶೇ. 9 ರಷ್ಟು ಬಡ್ಡಿ ವಿಧಿಸುವುದಾಗಿಯೂ ಆಯೋಗ ಎಚ್ಚರಿಸಿದೆ.





