April 8, 2026

ತೊಕ್ಕೋಟ್ಟು: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಏಳು ಮಂದಿ ಆರೋಪಿಗಳ ಬಂಧನ

0
image_editor_output_image425303304-1775657564313

ಮಂಗಳೂರು: ತೊಕ್ಕೊಟ್ಟಿ‌ನಲ್ಲಿ ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿ ಏಳು ಮಂದಿ ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ರಿಫತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಜ್ವಾನ್, ಇರ್ಷಾದ್ ಬಂಧಿತ‌ ಆರೋಪಿಗಳು ಎಂದು ತಿಳಿದು ಬಂದಿದೆ. ಹಳೇ ವೈಷಮ್ಯ ಮತ್ತು ರೌಡಿಶೀಟರ್ ನೌಫಲ್ ಸಾವನ್ನು ಆರೀಫ್‌ ಸಂಭ್ರಮಿಸಿದ್ದ ಎಂಬ ಕಾರಣಕ್ಕೆ ಕೊಲೆ ನಡೆದಿರುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ತನಿಖೆ ಬಗ್ಗೆ ಮಾಹಿತಿ ನೀಡಿರುವ ಅವರು, ಹತ್ಯೆಯಲ್ಲಿ ಆರು ಮಂದಿ ನೇರವಾಗಿ ಭಾಗಿಯಾಗಿದ್ದು, ಆರೀಫ್ ಬೈಕ್ ಅನ್ನು ಕಾರಿನಲ್ಲಿ ಹಿಂಬಾಲಿಸಿದ್ದರು. ಇನೋವಾ ಕಾರನ್ನು ಆರೀಫ್ ಸಂಚರಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಬಳಿಕ ಮಾರಕ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಇರ್ಷಾದ್ ಪ್ರಮುಖ ಸಹಾಯಕನಾಗಿದ್ದ. ಆರೋಪಿಗಳಿಗೆ ವಾಸ್ತವ್ಯ ಒದಗಿಸಿ, ಅವರನ್ನು ಘಟನೆ ಸ್ಥಳಕ್ಕೆ ಕರೆದುಕೊಂಡು ಹೋಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.

ಸುಹೈಲ್ ಎಂಬಾತ ಅಪರಾಧದಲ್ಲಿ ಬಳಸಿದ ಬಾಡಿಗೆ ವಾಹನವನ್ನು ವ್ಯವಸ್ಥೆ ಮಾಡಿ, ಅದನ್ನು ರಿಫತ್‌ಗೆ ಒಪ್ಪಿಸಿದ ನಂತರ ತಕ್ಷಣವೇ ಸೌದಿ ಅರೇಬಿಯಾಗೆ ಪರಾರಿಯಾಗಿದ್ದಾನೆ. ಈ ಹತ್ಯೆಯಲ್ಲಿ ಅರ್ಷಾದ್ ಪ್ರಮುಖ ಪಾತ್ರ ವಹಿಸಿದ್ದು ಆತ ಆಯುಧಗಳನ್ನು ಒದಗಿಸಿ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ, ಪೊಲೀಸ್ ಚಟುವಟಿಕೆಗಳನ್ನು ಗಮನಿಸಿ ತಕ್ಷಣದ ಮಾಹಿತಿಯನ್ನು ನೀಡುತ್ತಿದ್ದ.. ಅಲ್ಲದೆ, ಆತ ವೈಯಕ್ತಿಕ ವಾಹನ ವ್ಯವಸ್ಥೆ ಮಾಡಿ ಆರೋಪಿಗಳು ಪರಾರಿಯಾಗಿರುವ ಸಮಯದಲ್ಲಿ ಹಣಕಾಸು ಸಹಾಯ ಕೂಡ ನೀಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ತಿಳಿಸಿದರು.

ಹಿಂದಿನ ಪ್ರಕರಣದದಲ್ಲಿ ಸಹಆರೋಪಿಯಾಗಿದ್ದ ಅಶ್ವಿರ್ ತಾಂತ್ರಿಕ ಸಹಾಯ ನೀಡಿದ್ದಾನೆ. ಆತ ದುಬೈ ಮೂಲದ OTPಗಳನ್ನು ಒದಗಿಸಿ, ಆರೋಪಿಗಳು ಸ್ಥಳೀಯವಾಗಿ ಅಂತಾರಾಷ್ಟ್ರೀಯ ವಾಟ್ಸಾಪ್ ಖಾತೆಗಳನ್ನು ಬಳಸಲು ನೆರವಾಗಿದ್ದಾನೆ. ಒಂದು ಸಂಖ್ಯೆಯನ್ನು ಪೊಲೀಸರು ಪತ್ತೆಹಚ್ಚಿದಾಗ, ಹೊಸ ವಿವರಗಳನ್ನು ನೀಡಿ ಅವರ ಸಂವಹನವನ್ನು ಪತ್ತೆಯಾಗದಂತೆ ನೋಡಿಕೊಂಡಿದ್ದ. ಮುಸ್ತಫಾ ಮತ್ತು ಅಶ್ವೀರ್ ವಿದೇಶದಿಂದ ಆರೋಪಿಗಳಿಗೆ ಪ್ರಯಾಣ, ವಾಸ್ತವ್ಯ ಮತ್ತು ಇತರ ಲಾಜಿಸ್ಟಿಕ್ಸ್ ವ್ಯವಸ್ಥೆಗಳಿಗೆ ಅಗತ್ಯ ಹಣಕಾಸು ಒದಗಿಸಿರುವುದು ತನಿಖೆಯಲ್ಲಿ‌ ಕಂಡುಬಂದಿದೆ.

ಇಲ್ಲಿವರೆಗೆ ಆರು ಪ್ರಮುಖ ದಾಳಿಕೋರರು ಮತ್ತು ಇರ್ಷಾದ್ ಸೇರಿ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿಚಾರಣೆಯಿಂದ ಹತ್ಯೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆ ಕುರಿತು ಮಹತ್ವದ ಮಾಹಿತಿ ದೊರಕಿದೆ. ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳನ್ನು ಗುರುತಿಸಲು ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!