ಯುಎಇ ಮೂಲದ ಎರಡು ಟ್ಯಾಂಕರ್ ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ: ಓರ್ವ ಭಾರತೀಯ ಮೃತ್ಯು, ಎಂಟು ಮಂದಿಗೆ ಗಾಯ
ಒಮಾನ್: ಹಾರ್ಮುಝ್ ಜಲಸಂಧಿಯಲ್ಲಿ ಯುಎಇ ಧ್ವಜ ಹೊಂದಿದ್ದ ಎರಡು ಟ್ಯಾಂಕರ್‌ಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟು, ಇತರ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ಮಂಗಳವಾರ ಮುಂಜಾನೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇರಾನ್ ಗುರಿಯಾಗಿಸಿಕೊಂಡು ಅಮೆರಿಕಾ ನಡೆಸುತ್ತಿರುವ ಸರಣಿ ದಾಳಿಗಳು ಮತ್ತು ಹಾರ್ಮುಝ್ ಜಲಸಂಧಿಯ ನಿಯಂತ್ರಣಕ್ಕಾಗಿ ಹೆಚ್ಚುತ್ತಿರುವ ಸಂಘರ್ಷದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಯುಎಇ ರಕ್ಷಣಾ ಸಚಿವಾಲಯ, ಒಮಾನ್ ಪ್ರಾದೇಶಿಕ ಜಲಪ್ರದೇಶಕ್ಕೆ ಒಳಪಡುವ ಹಾರ್ಮುಝ್ ಜಲಸಂಧಿಯ ದಕ್ಷಿಣ ಮಾರ್ಗದಲ್ಲಿ ಮೊಂಬಾಸಾ ಮತ್ತು ಬಹಿಯಾ ಎಂಬ ಟ್ಯಾಂಕರ್‌ಗಳ ಮೇಲೆ ಎರಡು ಕ್ಷಿಪಣಿಗಳ ದಾಳಿ ನಡೆದಿದೆ. ದಾಳಿಯಿಂದಾಗಿ ಎರಡೂ ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಮೊಂಬಾಸಾದಲ್ಲಿದ್ದ ಭಾರತೀಯ ಪ್ರಜೆಯೊಬ್ಬರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಎಂಟು ಜನ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಆರು ಮಂದಿ ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದ್ದಾರೆ ಎಂದು ತಿಳಿಸಿದೆ.




