ಮಂಗಳೂರು: ಕೆಲಸಕ್ಕೆ ಬಾಂಗ್ಲಾದೇಶಿ ಪ್ರಜೆಗಳನ್ನು ಕರೆತಂದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ನಗರದಲ್ಲಿ ಕೆಲಸಕ್ಕೆ ಬಾಂಗ್ಲಾದೇಶಿ ಪ್ರಜೆಗಳನ್ನು ಕರೆತಂದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಮೊಯ್ದಿನ್ ಇಸ್ಲಾಂ, ರಸೂಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಮಂಗಳೂರಿಗೆ ಕರೆತಂದು ಕೆಲಸಕ್ಕೆ ನಿಯೋಜಿಸುತ್ತಿದ್ದು, ಅವರೊಂದಿಗೆ ಕೆಲ ಬಾಂಗ್ಲಾದೇಶಿ ಪ್ರಜೆಗಳನ್ನೂ ಅಕ್ರಮವಾಗಿ ಕರೆತಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಯ್ದಿನ್ ಇಸ್ಲಾಂ ಮತ್ತು ದಿಲ್ವಾರ್ ಹುಸೇನ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
ಇನ್ನೋರ್ವ ಆರೋಪಿ ರಸೂಲ್ ಇಸ್ಲಾಂನನ್ನು ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಸಮನ್ವಯದಲ್ಲಿ ಕೋಲ್ಕತ್ತಾ ಪೊಲೀಸರು ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲು ನಗರ ಪೊಲೀಸ್ ತಂಡ ಈಗಾಗಲೇ ಕೋಲ್ಕತ್ತಾಕ್ಕೆ ತೆರಳಿದೆ.
ಆರೋಪಿಯನ್ನು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.




