ಉಡುಪಿ: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲೇ ಉದ್ಯಮಿ ಆತ್ಮಹತ್ಯೆ
ಉಡುಪಿ: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲೇ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉದ್ಯಮಿಯ ಸಾವು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಮಾವ ಹಾಗೂ ಸೊಸೆಯ ಮಧ್ಯೆ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ.
ಸುದೀಪ್ ಶೆಟ್ಟಿ ಮೃತ ಉದ್ಯಮಿ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ, ಮೇಕಪ್ ಆರ್ಟಿಸ್ಟ್ ಹಾಗೂ ನಾಟಕ ತಂಡಗಳಲ್ಲಿ ಕಲಾವಿದೆಯಾಗಿದ್ದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದನ್ನೂ ಓದಿ: ಇರಾನ್ ಮೇಲೆ ಪರಮಾಣು ದಾಳಿಗೆ ಸಿದ್ಧತೆ: ವಿಶ್ವಸಂಸ್ಥೆಯ ರಾಜತಾಂತ್ರಿಕ ರಾಜೀನಾಮೆ
ಈಕೆಯ ಬ್ಯೂಟಿಗೆ ಮಾರುಹೋದ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಕಳೆದ ಒಂದು ವರ್ಷದಿಂದ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದ. ಕೊನೆಗೂ ಒಂದು ವರ್ಷದ ನಂತರ ಈಕೆ ಆತನ ಮೆಸೇಜ್‌ಗೆ ರಿಪ್ಲೈ ಮಾಡಿದ್ದೇ ತಡ ಆಕೆಗೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಮನೆಯವರನ್ನ ಒಪ್ಪಿಸಿದರೆ ಓಕೆ ಅಂತ ಸೌಮ್ಯ ಹೇಳಿದ್ದೇ ತಡ ಎರಡೂ ಮನೆಯವರನ್ನ ಹೇಗೋ ಒಪ್ಪಿಸಿ ಹೆಣ್ಣು ನೋಡುವ ಶಾಸ್ತ್ರ ಕೂಡ ನಡೆಯಿತು. ಈ ಖುಷಿಯ ಕ್ಷಣ ನಡೆದು ಕೆಲವು ತಿಂಗಳಲ್ಲೇ ಸಂಪೂರ್ಣ ಚಿತ್ರಣವೇ ಬದಲಾಗಿದೆ.
ಈಗ ಮಗನ ಸಾವಿಗೆ ಸೊಸೆಯ ಪ್ರಚೋದನೆ ಕಾರಣ ಅಂತ ಮಾವ ದೂರು ದಾಖಲಿಸಿದ್ದಾರೆ. ಇತ್ತ ನಾನೇನು ತಪ್ಪು ಮಾಡಿಲ್ಲ. ಜೊತೆಯಲ್ಲಿರುವಾಗ ಖುಷಿಯಲ್ಲೇ ಇದ್ದೆವು. ಅತ್ತೆಗೆ ಮಗನ ಪ್ರೀತಿ ಇಷ್ಟವಿರಲಿಲ್ಲ. ಸಾಲದ ಚಿಂತೆಯೂ ಇತ್ತು. ಒಂದು ವೇಳೆ ನಾನು ಕಾರಣ ಆದರೆ ನಾನ್ಯಾಕೆ ಗಂಡನನ್ನು ಎರಡೆರಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿ ದೂರನ್ನು ನೀಡಲು ಮುಂದಾಗಿದ್ದಾರೆ ಸೌಮ್ಯ ಶೆಟ್ಟಿ. ಒಟ್ಟಾರೆ ಯುವತಿಯ ಹಿಂದೆ ಬಿದ್ದು ಒಲಿಸಿ ಮದುವೆಯಾಗಿದ್ದ ಉದ್ಯಮಿಯ ಜೀವನ ದುರಂತ ಅಂತ್ಯ ಕಂಡಿದೆ.




