March 28, 2026

ಕಾರ್ಕಳ: ಕೋಳಿ ವ್ಯವಹಾರದ ಹಣದ ವಿಚಾರಕ್ಕೆ ಹಲ್ಲೆ: ನಾಲ್ವರು ಆರೋಪಿಗಳ ಬಂಧನ

0
image_editor_output_image988793895-1774689797545.jpg

ಕಾರ್ಕಳ: ಕೋಳಿ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ.

ಮಾರ್ಚ್ 26 ರಂದು ರಾತ್ರಿ ಸುಮಾರು 8 ಗಂಟೆಗೆ ಅಂದಾರು ಗ್ರಾಮದ ಮುತ್ತುಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಹರೀಶ್, ಸುಧೀರ್, ದುರ್ಗಾ, ಗುರುದೀಶ್ ಮತ್ತು ಪ್ರತಾಪ್ ಸೇರಿದಂತೆ ಸುಮಾರು 15 ಜನರ ತಂಡವು ಕಾರು ಮತ್ತು ಬೈಕ್‌ಗಳಲ್ಲಿ ಬಂದು ಸುದರ್ಶನ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಜಗಳವನ್ನು ಬಿಡಿಸಲು ಪದ್ಮಾ ಮತ್ತು ಆಕಾಶ್ ಎಂಬುವವರು ಪ್ರಯತ್ನಿಸಿದಾಗ, ಹರೀಶ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಮಾರಾಮಾರಿಯ ಸಂದರ್ಭದಲ್ಲಿ ಆಕಾಶ್ ಎಂಬುವವರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!