March 28, 2026

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ನಿಂದಿಸಿದ ಪ್ರೊಫೆಸರ್: ಆರೋಪಿ ಮರಳೀಧರ ಸೇವೆಯಿಂದ ಅಮಾನತು

0
image_editor_output_image1781637293-1774685715313.jpg

ಬೆಂಗಳೂರು: ನಗರದ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬರನ್ನು ‘ಭಯೋತ್ಪಾದಕ’ ಎಂದು ಕರೆದು ನಿಂದಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆರೋಪಿ ಪ್ರೊಫೆಸರ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಡಾ. ಮೂರಳಿಧರ ದೇಶಪಾಂಡೆ ಅವರು ಪಾಠ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ತರಗತಿಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದರಿಂದ ಕೆರಳಿದ ಪ್ರೊಫೆಸರ್, ವಿದ್ಯಾರ್ಥಿಯೊಬ್ಬನನ್ನು ಉದ್ದೇಶಿಸಿ ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ. “ನೀವೆಲ್ಲಾ ಭಯೋತ್ಪಾದಕರು” ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರೊಫೆಸರ್ ವಿದ್ಯಾರ್ಥಿಯನ್ನು ನಿಂದಿಸುತ್ತಿದ್ದ ದೃಶ್ಯವನ್ನು ಸಹಪಾಠಿಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ನೀಡಬೇಕಾದ ಗುರುಗಳೇ ಇಂತಹ ಕೋಮು ದ್ವೇಷದ ಮಾತುಗಳನ್ನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಈಗಾಗಲೇ ದೂರು ದಾಖಲಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಆಂತರಿಕ ತನಿಖೆಗೆ ಆದೇಶಿಸಿದೆ ಹಾಗೂ ತನಿಖೆ ಪೂರ್ಣಗೊಳ್ಳುವವರೆಗೆ ಡಾ. ಮೂರಳಿಧರ ದೇಶಪಾಂಡೆ ಅವರನ್ನು ಅಮಾನತುಗೊಳಿಸಿದೆ. ಕಳೆದ ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಪ್ರಸ್ತುತ ವಿಶ್ವವಿದ್ಯಾಲಯದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!