March 27, 2026

ಉಳ್ಳಾಲ: ಮಾರಕಾಯುಧಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

0
IMG-20260327-WA0010

ಉಳ್ಳಾಲ : ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಬೆಳಗಿನ ಜಾವ ಭೀಕರ ಹತ್ಯೆ ಸಂಭವಿಸಿದ್ದು, ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತರನ್ನು ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (42), ಅಲಿಯಾಸ್ ‘ಟ್ಯಾಬ್ಲೆಟ್ ಆರೀಫ್’ ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದರು.

ಆರೀಫ್ ಅವರು ಮೀನಿನ ವ್ಯಾಪಾರ ನಡೆಸುತ್ತಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು 3.30ರ ವೇಳೆಗೆ ತಮ್ಮ ಬುಲೆಟ್ ಬೈಕ್‌ನಲ್ಲಿ ಮಂಗಳೂರಿನ ಕಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಮೇಲ್ಸೇತುವೆಯಲ್ಲಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡವು ಅವರ ಮೇಲೆ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅವರನ್ನು ಸ್ಥಳದಲ್ಲೇ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಮನಾರ್ಹವಾಗಿ, 2022ರ ಮೇ ತಿಂಗಳಲ್ಲಿ ಇದೇ ರೀತಿಯಾಗಿ ಆರೀಫ್ ಮೇಲೆ ದಾಳಿ ನಡೆದಿದ್ದು, ಬಜಾಲ್ ಮೂಲದ ಟೊಪ್ಪಿ ನೌಫಾಲ್ ಹಾಗೂ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿತ್ತು. ಮೂಲತಃ ಕುದ್ರೋಳಿ ನಿವಾಸಿಯಾಗಿದ್ದ ಆರೀಫ್, ಕಳೆದ ಕೆಲವು ವರ್ಷಗಳಿಂದ ಕುಟುಂಬ ಸಮೇತ ಅಜ್ಜಿನಡ್ಕ ಸಮೀಪದ ಮುಳ್ಳುಗುಡ್ಡೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!