ತೊಕ್ಕೊಟ್ಟು: ರೌಡಿಶೀಟರ್ ಹತ್ಯೆ ಪ್ರಕರಣ: ಕೃತ್ಯ ಬಳಸಿದ ಕಾರು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಪತ್ತೆ
ವಿಟ್ಲ: ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೆಳ್ಳಂಬೆಳಗ್ಗೆ ನಡೆದ ರೌಡಿಶೀಟರ್ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರು ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿ ಎಂಬಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರಿಫ್‌ನನ್ನು ಬೈಕ್‌ನಿಂದ ಕೆಡವಿ ಹತ್ಯೆ ಮಾಡಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಅಲರ್ಟ್ ಆಗಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ನಡುವೆ ಬಂಟ್ವಾಳದ ಬುಡೋಳಿಯಲ್ಲಿ ಶಂಕಾಸ್ಪದ ಕಾರು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ವಿಟ್ಲ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ, ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.




