ಕೋಟ: ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿ ಚಾರ್ಜ್ ಪ್ರಕರಣ: ಪಿಎಸ್‌ಐ ಅಮಾನತು
ಕೋಟ: ಡಿಜೆ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ಮದುವೆ ಮನೆಗೆ ನುಗ್ಗಿ ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪಿಎಸ್‌ಐ ಸಂತೋಷ್ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯ ಐಜಿಪಿ ಆದೇಶ ನೀಡಿದ್ದಾರೆ.
ಮದುವೆ ಮನೆಗೆ ನುಗ್ಗಿ ಮದುಮಗ ಸೇರಿದಂತೆ ಹಲವರಿಗೆ ಥಳಿಸಿದ ಆರೋಪ ಕೇಳಿ ಬಂದ ಬೆನ್ನಲ್ಲೇ ಪಶ್ಚಿಮ ವಲಯ ಐಜಿಪಿ ಈ ಕ್ರಮ ಕೈಗೊಂಡಿದ್ದಾರೆ.
ಘಟನೆ ವೈರಲ್ ಆಗುತ್ತಿದ್ದಂತೆ ಪೊಲೀಸ್ ದೌರ್ಜನ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದನ್ನರಿತ ಐಜಿಪಿ ಪಿಎಸ್‌ಐರನ್ನು ಅಮಾನತುಗೊಳಿಸಿ ಉಳಿದ ಐವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.
ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಕೊರಗ ಸಮುದಾಯದ ಮದುವೆ ಸಮಾರಂಭದಲ್ಲಿ ಡಿಜೆ ಹಾಕಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಪೊಲೀಸರು ಮದುವೆ ಮನೆಗೆ ನುಗ್ಗಿ ದಾಂಧಲೆ ನಡೆಸಿ ಲಾಠಿ ಬೀಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮದುಮಗ ಸೇರಿದಂತೆ ಹಲವರ ಮೇಲೆ ಖಾಕಿ ಪಡೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.