February 2, 2026

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಚಕಮಕಿ: ತಲವಾರ್ ಹಿಡಿದು ಎನ್‌ಎಸ್‌ಯುಐ ಉಪಾಧ್ಯಕ್ಷನಿಗೆ ಹಲ್ಲೆ

0
image_editor_output_image-367663677-1770017115619.jpg

ಉಡುಪಿ: ಹೊಟೇಲ್ ಒಂದರಲ್ಲಿ ಊಟ ಮಾಡುವ ವೇಳೆ ನಡೆದ ಕ್ಷುಲ್ಲಕ ಮಾತಿನ ಚಕಮಕಿ ಬಳಿಕ ತಲವಾರ್ ಹಿಡಿದು ಹಲ್ಲೆಗೆ ಯತ್ನಿಸಿದ ಹಂತಕ್ಕೆ ಹೋದ ಘಟನೆ ಜನವರಿ 30ರಂದು ರಾತ್ರಿ ನಗರದ ಪಿಪಿಸಿ ಕ್ರಾಸ್ ಬಳಿ ನಡೆದಿದೆ.

ಘಟನೆಯಲ್ಲಿ ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ, ಬೈಲೂರು ಚಿಟ್ಪಾಡಿ ನಿವಾಸಿ ಶರತ್ ಕುಂದರ್(25) ಕೈಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಟ್ಪಾಡಿಯ ಶರತ್ ಕುಂದರ್ ಅವರು ಜನವರಿ 30ರಂದು ರಾತ್ರಿ 9ಕ್ಕೆ ತನ್ನ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹಕುನಾ ಮಟಾಟ ಹೊಟೇಲ್‌ಗೆ ಊಟಕ್ಕೆಂದು ಹೋಗಿದ್ದರು. ಅವರ ಸ್ನೇಹಿತರಾದ ಅಕ್ಷತ್‌ ಪೈ , ಶಶಾಂಕ್‌ ಹಾಗೂ ರಮಾನಂದ ಪೈ ಅಲ್ಲಿದ್ದರು.

ಈ ವೇಳೆ ಶರತ್ ಕುಂದರ್ ಅವರ ಕೈಗೆ ರಮಾನಂದ ಪೈ ಅವರ ಕೈ ತಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಗಲಾಟೆ ನಡೆದಿದೆ. ಅನಂತರ ಶರತ್ ಕುಂದರ್ ಅವರು ವಾಪಾಸು ಮನೆಗೆ ಹೊರಟಿದ್ದು, ಕಲ್ಸಂಕ ಬಳಿತ ತಲುಪುವಾಗ ಅಕ್ಷತ್‌ ಪೈ ಕರೆ ಮಾಡಿ ಹೊಟೇಲ್‌ನಲ್ಲಿ ಗಲಾಟೆ ಆದ ಬಗ್ಗೆ ಮಾತನಾಡಲು ಇದೆ ನೀವು ಪಿಪಿಸಿ ಕ್ರಾಸ್‌ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ಅದರಂತೆ ಶರತ್ ಕುಂದರ್ ಅವರು ಧ್ರುವಾ, ಸಿಲಾನ್‌ ಗಗನ್‌, ರೋಹಿತ್‌ ಅವರೊಂದಿಗೆ ಸೇರಿ ಪಿಪಿಸಿ ಕ್ರಾಸ್‌ ಬಳಿ ಇರುವ ಕೋಸ್ಟಲ್‌ ಚಿಕನ್‌ ಅಂಗಡಿಯ ಎದುರು ರಸ್ತೆಯ ಬದಿಯಲ್ಲಿ ನಿಂತು ಅವರನ್ನು ಕಾಯುತ್ತಿದ್ದರು. ರಾತ್ರಿ ಸುಮಾರು 11.30ಕ್ಕೆ ಟಾಟಾಸಫಾರಿ, ಮಹೀಂದ್ರಥಾರ್‌ ವಾಹನಗಳು ಏಕಾಏಕಿ ಶರತ್ ಕುಂದರ್‌ ಬಳಿ ಬಂದು ನಿಂತಿದೆ.

ಟಾಟಾ ಸಫಾರಿಯಿಂದ ಅಕ್ಷತ್‌ ಪೈ, ಶಶಾಂಕ ಹಾಗೂಇತರ 6-7 ಜನರು ವಾಹನದಿಂದ ಇಳಿದು ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚಯರ್‌ನಿಂದ ಶರತ್‌ ಕುಂದರ್‌ ಅವರನ್ನು ಕೊಲ್ಲುವ ಉದ್ದೇಶದಿಂದ ಆಯುಧದಿಂದ ತಲೆಗೆ ಬೀಸಿದ್ದಾರೆ. ಆಗ ಅವರು ಎರಡೂ ಕೈಗಳನ್ನು ಮುಂದಕ್ಕೆ ಚಾಚಿದ್ದಾರೆ. ಈ ವೇಳೆ ಆರೋಪಿ ರಮಾನಂದ ಪೈ ತಲವಾರಿನಿಂದ ಬೀಸಿದ್ದು, ಇದರಿಂದ ಶರತ್‌ ಕುಂದರ್‌ ಅವರ ಬಲಅಂಗೈ, ಮಧ್ಯದ ಬೆರಳಿಗೆ, ಎಡಕೈಮಣಿಗಂಟಿನ ಒಳಭಾಗಕ್ಕೆ, ಕಿರುಬೆರೆಳಿಗೆ ರಕ್ತಗಾಯವಾಗಿದೆ. ಶರತ್‌ ಕುಂದರ್‌ ಜತೆಗಿದ್ದ ಸ್ನೇಹಿತರು ಬೊಬ್ಬೆ ಹೊಡೆದಿದ್ದು ಆಗ ಆರೋಪಿಗಳೆಲ್ಲರೂ ಜೀವಬೆದರಿಕೆ ಹಾಕಿಹೋಗಿದ್ದಾರೆ. ಗಾಯಾಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!