ರಾಜ್ಯ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಲಿ: ರೇಣುಕಾಚಾರ್ಯ
ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಳಬರು ರಾಜೀನಾಮೆ ನೀಡಬೇಕು, ಗುಜರಾತ್ ಮಾದರಿ ಸಂಪುಟ ರಚನೆ ಆಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು-ನಾಲ್ಕು ಬಾರಿ ಸಚಿವರಾದವರು ಸ್ವಯಂ ಸ್ಫೂರ್ತಿಯಿಂದ ರಾಜೀನಾಮೆ ನೀಡಬೇಕು. ಈ ಕುರಿತಾಗಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಹಿರಿಯರು ಮಾಡಬೇಕು. ಅಧಿಕಾರ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲಿ ನನಗೇ ಸಚಿವ ಸ್ಥಾನ ಕೊಡಬೇಕೆಂದಿಲ್ಲ, ಯಾರಿಗೆ ಬೇಕಾದ್ರೂ ಸಚಿವ ಸ್ಥಾನ ಕೊಡಲಿ ಹೊಸ ಮುಖಗಳಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ಕರೆ ವಿಚಾರದಲ್ಲಿ ಇದು ಕಾಂಗ್ರೆಸ್ ಪ್ರಾಯೋಜಿತ ಹೋರಾಟ, ಕೋವಿಡ್ ನಿಂದ ಜನ ಬಳಲಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಆಚರಿಸುವುದು ಸರಿಯಲ್ಲ. ಎಂಇಎಸ್ ಮೇಲಿನ ನಿರ್ಬಂಧಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಬಂದ್ ಆಚರಿಸಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದರು.




