ಎಡಿಜಿಪಿ ಭಾಸ್ಕರ್ ರಾವ್ ಅವರ ಸ್ವಯಂ ನಿವೃತ್ತಿಗೆ ಸರ್ಕಾರ ಒಪ್ಪಿಗೆ
ಬೆಂಗಳೂರು: ಮಾಜಿ ಪೊಲೀಸ್ ಆಯುಕ್ತ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಭಾಸ್ಕರ್ ರಾವ್ ಅವರ ಸ್ವಯಂ ನಿವೃತ್ತಿ ಅರ್ಜಿಯನ್ನು ಸರ್ಕಾರ ಅನುಮೋದಿಸಿದ್ದು, ಡಿಸೆಂಬರ್ 31 ರಂದು ಸ್ವಯಂ ನಿವೃತ್ತಿ ಹೊಂದಲಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಸ್ವತಃ ಭಾಸ್ಕರ್ ರಾವ್ ಅವರೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದು, ತಮ್ಮ ಸ್ವಯಂ ನಿವೃತ್ತಿ ಮನವಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.
ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ಭಾಸ್ಕರ್ ರಾವ್ ಅವರು ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆಂದು ಕೆಲ ಸುದ್ದಿಗಳು ಪ್ರಕಟಗೊಂಡಿದ್ದವು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾಸ್ಕರ್ ರಾವ್ ಅವರು, ಟ್ರಾವೆಲ್ ಮಾಡಲು ಬಯಸಿದ್ದೇನೆ. ನನ್ನ ಕುಟುಂಬಸ್ಥರೊಂದಿಗೆ ಸಮಯ ಕಳೆಯುವುದು, ಪಾಠ ಹೇಳಿಕೊಡುವುದರೊಂದಿಗೆ ಕಾಲ ಕಳೆಯಲು ಬಯಸಿದ್ದೇನೆಂದು ಹೇಳಿದ್ದಾರೆ.
1954ರಂದು ಜನಿಸಿದ ಭಾಸ್ಕರ್ ರಾವ್ ಅವರು 2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಎಡಿಜಿಪಿ ಸಂಜಯ್ ಸಹಾಯ್ ಅವರೂ ಸ್ವಯಂ ನಿವೃತ್ತಿ ಪಡೆದಿದ್ದರು.
ರಾವ್ ಅವರು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿಗೆ (VRS) ಅರ್ಜಿ ಸಲ್ಲಿಸಿದ್ದರು. ಕೂಡಲೇ ಅನುಮೋದನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಅವರ ಕಡತ ಮುಖ್ಯಮಂತ್ರಿ ಬಳಿ ಬಾಕಿ ಉಳಿದಿದ್ದು, ಇತ್ತೀಚೆಗಷ್ಟೇ ಅವರು ಸಹಿ ಹಾಕಿದ್ದಾರೆಂದು ತಿಳಿದುಬಂದಿದೆ.
ರಾವ್ ಅವರ ನಿವೃತ್ತಿಯೊಂದಿಗೆ, ಎಡಿಜಿಪಿ ಶ್ರೇಣಿಯ ಎರಡನೇ ಹುದ್ದೆ ರಾಜ್ಯದಲ್ಲಿ ಖಾಲಿ ಬೀಳಲಿದೆ. ಎಡಿಜಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣದ ಹುದ್ದೆ ಖಾಲಿ ಇದೆ. ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯೂ ಎಡಿಜಿಪಿ ಶ್ರೇಣಿಯದ್ದಾಗಿದೆ.