ಮಂಗಳೂರು: ಕೊಲೆ ಸಹಿತ 31 ಪ್ರಕರಣಗಳಲ್ಲಿ ಭಾಗಿ: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಅರೆಸ್ಟ್
ಮಂಗಳೂರು: ಕೊಲೆ, ಗ್ಯಾಂಗ್ ರೇಪ್, ದರೋಡೆಯಂತಹ ಬರೋಬ್ಬರಿ 31 ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಒಂಬತ್ತು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ನಾಪತ್ತೆಯಾಗಿದ್ದ ಕುಖ್ಯಾತ ರೌಡಿಶೀಟರ್ ಸಪ್ವಾನ್ ಹುಸೈನ್ ನನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಹುಡುಕಿ ಅರೆಸ್ಟ್ ಮಾಡಿದ್ದಾರೆ.
ಆರೋಪಿ ಸಪ್ವಾನ್ ಹುಸೇನ್ ಮೇಲೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 02 ಕೊಲೆ, 04 ಕೊಲೆಯತ್ನ, ಗ್ಯಾಂಗ್ ರೇಪ್, 05 ದರೋಡೆ, ಆಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಹಲ್ಲೆ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ. ಕರ್ತವ್ಯಕ್ಕೆ ಅಡ್ಡಿ ದರೋಡೆಗೆ ತಯಾರಿ ಮತ್ತು ಸಂಚು. ಮುಂತಾದ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 31 ಪ್ರಕರಣಗಳು ದಾಖಲಾಗಿದೆ.
ಈತನ ವಿರುದ್ಧ ಮುಲ್ಕಿಯಲ್ಲಿ 2008ರಲ್ಲಿ ನಡೆದಿದ್ದ ಪ್ರವೀಣ್ ಕೊಲೆ ಪ್ರಕರಣದಲ್ಲಿ ಪ್ರಕರಣದಲ್ಲಿ ಹೈಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲ್ಲದೇ, ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008 ರಲ್ಲಿ ದರೋಡೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ 3 ವರ್ಷ ಶಿಕ್ಷೆಗೆ ಒಳಗಾಗಿರುತ್ತಾನೆ. ಈತನ ವಿರುದ್ಧ 12 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದು, ಮಾನ್ಯ ನ್ಯಾಯಾಲಯದಿಂದ ದಸ್ತಗಿರಿ ವಾರೆಂಟ್ ಗಳನ್ನು ಹೊರಡಿಸಲಾಗಿರುತ್ತದೆ. 05 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ಎಲ್.ಪಿ.ಸಿ ಎಂದು ಘೋಷಿಸಲಾಗಿದೆ.




