ಪುತ್ತೂರು: ಇನ್ಸೂರೆನ್ಸ್ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ: ಮಂಡ್ಯ ಮೂಲದ ಆರೋಪಿಯ ಬಂಧನ
ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ಅತಿಬುದ್ಧಿವಂತನೋರ್ವ ಪುತ್ತೂರು ಮೂಲದ ಯಶೋಧರ ಎಂಬವರಿಗೆ ವಿವಿಧ ಮೊಬೈಲ್ ನಂಬರುಗಳಿಂದ ಕರೆ ಮಾಡಿ, Insurance ಮಾಡಿಸಿಕೊಡುವುದಾಗಿ ಹಾಗೂ ಆ ಬಗ್ಗೆ ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಹಣ ನೀಡಲು ನಿರಾಕರಿಸಿದಾಗ ಇನ್ಸುರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಿ, ಯಶೋಧರ ಅವರ Credit Card ನಂಬರ್ ಹಾಗೂ OTP ಪಡೆದು, Credit Card ನಿಂದ 2,37,036/- ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುತ್ತಾನೆ.
ಈ ಬಗ್ಗೆ ಯಶೋಧರ ಅವರು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2025, U/S: 66(D) IT ACT & 318(4), 319(2) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಮಹಾರಾಷ್ಟ ಮೂಲದ ಹಾಗೂ ಪ್ರಸ್ತುತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸಿಸುತ್ತಿರುವ ಆರೋಪಿ ಅವಿನಾಶ್ ರಮೇಶ್ ಗೌಡ (24) ಎಂಬಾತನನ್ನು, ದಿನಾಂಕ: 11-02-2026 ರಂದು ದಸ್ತಗಿರಿ ಮಾಡಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಿರುವುದಾಗಿದೆ.




