ಪುತ್ತೂರು ಖಾಸಗಿ ಕಾಲೇಜಿನಲ್ಲಿ ಕೋಮುಪ್ರಚೋದಕ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ FIR ದಾಖಲು
ಪುತ್ತೂರು ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ, ಕೋಮುದ್ವೇಷ ಹಾಗೂ ಹಿಂಸೆಗೆ ಪ್ರಚೋದನೆ ನೀಡುವಂತೆ ಭಾಷಣ ಬಿಗಿದ ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ಧ ಮತ್ತು ಭಾಷಣ ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ಹಾಗೂ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿದೆ.
ದಿನಾಂಕ 12.01.2026ರಂದು ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಆರೋಪಿತರಾದ ಡಾ.ಕಲ್ಲಡ ಪ್ರಭಾಕರ ಭಟ್ ರವರು, ಕಾರ್ಯಕ್ರಮದಲ್ಲಿ ನೆರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ, ಕೋಮುಧ್ವೇಶದ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿರುತ್ತಾರೆ. ಸದ್ರಿ ಭಾಷಣವನ್ನು “VIKASANA TV” (ವಿಕಸನ ಟಿವಿ)ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಿರುತ್ತಾರೆ. ಆದ್ದರಿಂದ ಸದ್ರಿ ಕಾರ್ಯಕ್ರಮದಲ್ಲಿ ಕೋಮುಧ್ವೇಶದ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ರವರ ವಿರುದ್ದ ಮತ್ತು ಸದ್ರಿ ಭಾಷಣವನ್ನು ಪ್ರಸಾರ ಮಾಡಿದ “VIKASANA TV” (ವಿಕಸನ ಟಿವಿ)ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಹಾಗೂ ಸದ್ರಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರ ವಿರುದ್ದ ಕಾನೂನುಕ್ರಮ ಕೈಗೊಳ್ಳುವಂತೆ ಪುತ್ತೂರು ನಗರ ಠಾಣೆಗೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ತಾಲೂಕು ಸಮಿತಿ ಅಧ್ಯಕ್ಷರಾದಪುತ್ತೂರು ನಿವಾಸಿ ರಾಮಚಂದ್ರ ಕೆ. ಎಂಬವರು ದೂರು ನೀಡಿದ್ದರು.
ದೂರಿಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2026, ಕಲಂ:196,299,302,353(2),3(5) BNS ರಂತೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೋಮುಪ್ರಚೋದಕ ಹಾಗೂ ಸಮಾಜದ ಅಶಾಂತಿಗೆ ಕಾರಣವಾಗುವಂತೆ ಭಾಷಣ ಬಿಗಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಈಶ್ವರಿ ಪದ್ಮುಂಜ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿಗೊಳಗಾಗಿದ್ದ ಭಟ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.




