ಸಾಮಾಜಿಕ ಜಾಲತಾಣದಲ್ಲಿ ವೈರಲ್ ಯುವಕನ ಸಾವು ಪ್ರಕರಣ: ವಿಡಿಯೋ ಮಾಡಿದ್ದ ಯುವತಿಯ ವಿರುದ್ಧ FIR ದಾಖಲು
ಕೋಝಿಕ್ಕೋಡ್: ರಶ್ ಇದ್ದ ಬಸ್ ನಲ್ಲಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣಳಾಗಿದ್ದ ಯುವತಿಯ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಡಕರದ ಶಿಮ್ಜಿತಾ ಮುಸ್ತಫಾ (35) ವಿರುದ್ಧ ಕೋಝಿಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ, ಗೋವಿಂದಪುರಂನಲ್ಲಿ ವಾಸಿಸುತ್ತಿದ್ದ ಪುತಿಯಾರ ಮೂಲದ ದೀಪಕ್ ಯು , ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಕೆಲಸದ ನಿಮಿತ್ತ ಶುಕ್ರವಾರ ಕಣ್ಣೂರಿಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ತಫಾ, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ದೀಪಕ್ ಅವರ ಗಮನಕ್ಕೆ ಬಂದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.




