ಮಡಿಕೇರಿ: ಚಾಲಕ ನವಾಝ್ ನಿಗೂಢ ಸಾವು ಪ್ರಕರಣ: ಓರ್ವ ಮಹಿಳೆ ಸೇರಿ ಐವರ ಬಂಧನ
ಮಡಿಕೇರಿ: ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ನಿವಾಸಿ ಚಾಲಕ ನವಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ, ಕಾವ್ಯ, ಅಶೋಕ್, ಕುಮಾರ್ ಹಾಗೂ ಮಹೇಂದ್ರ ಬಂಧಿತ ಆರೋಪಿಗಳು.
ಡಿ.31 ರಂದು ರಾತ್ರಿ ತನ್ನ ಕಾರಿನಲ್ಲಿ ಕುಂದಾ ಗ್ರಾಮಕ್ಕೆ ತೆರಳಿದ್ದ ನವಾಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ನವಾಜ್ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ. ಕುಂದಾ ಗ್ರಾಮಕ್ಕೆ ನಡುರಾತ್ರಿಯ ವೇಳೆ ತೆರಳಿದ್ದ ನವಾಜ್ ಮತ್ತೊಬ್ಬ ಚಾಲಕ ಪೂರ್ಣಚಂದ್ರ ತೇಜಸ್ವಿಯ ಮನೆ ಬಾಗಿಲು ಬಡಿದು ಆತನ ಪತ್ನಿ ಕಾವ್ಯಾಳ ಹೆಸರು ಕರೆದಿದ್ದ ಎಂದು ಹೇಳಲಾಗಿದೆ.
ಈ ಸಂದರ್ಭ ಮನೆಯಿಂದ ಹೊರಬಂದ ಪೂರ್ಣಚಂದ್ರ ತೇಜಸ್ವಿ ನವಾಜ್ ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ. ಅಲ್ಲದೆ ಅಶೋಕ್, ಕುಮಾರ್ ಹಾಗೂ ಮಹೇಂದ್ರನ ಸಹಕಾರ ಪಡೆದು ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ನವಾಜ್ ನನ್ನು ರಸ್ತೆ ಬದಿ ಬಿಟ್ಟು, ಆತನ ಕಾರನ್ನು ರಸ್ತೆ ಬದಿಯ ಚರಂಡಿಗೆ ತಳ್ಳಿ ಪ್ರಕರಣವನ್ನು ಅಪಘಾತ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ.




