ಯಲ್ಲಾಪುರದ ರಂಜಿತಾ ಕೊಲೆ ಪ್ರಕರಣ: ಆರೋಪಿ ಆತ್ಮಹತ್ಯೆ
ಉತ್ತರ ಕನ್ನಡ: ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಹಾಡಹಗಲೇ ರಂಜಿತಾ ಬನ್ಸೊಡೆ (30) ಎಂಬ ಮಹಿಳೆಗೆ ಇರಿದು ಪರಾರಿಯಾಗಿದ್ದ ರಫಿಕ್ ಯಳ್ಳೂರ ಭಾನುವಾರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಯಲ್ಲಾಪುರ ಪಟ್ಟಣದ ಖಾಜಲ್ವಾಡ ಅರಣ್ಯ ಪ್ರದೇಶದಲ್ಲಿ ರಫೀಕ್ ಮೃತದೇಹ ರಫೀಕ್ ಮೃತದೇಹವು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮದುವೆಯಾಗಿ ವಿಚ್ಛೇದನ ಹೊಂದಿದ್ದ ರಂಜಿತಾಗೆ ರಫೀಕ್ ಅನೇಕ ವರ್ಷಗಳಿಂದ ಪರಿಚಿತನಾಗಿದ್ದು, ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಸತಾಯಿಸುತ್ತಿದ್ದ ಎನ್ನಲಾಗಿದ್ದು, ಇದಕ್ಕೆ ನಿರಾಕರಿಸಿದ ರಂಜಿತಾ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದಿದ್ದ ಆರೋಪಿ ರಫೀಕ್ ಶನಿವಾರ ರಂಜಿತಾ ಕೆಲಸ ಮುಗಿಸಿ ಶಾಲೆಯಿಂದ ಬರುತ್ತಿದ್ದ ವೇಳೆ ಅಡ್ಡಗಟ್ಟಿದ್ದ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆರೋಪಿ ರಫೀಕ್ ಹರಿತವಾದ ಆಯುಧದಿಂದ ರಂಜಿತಾಳ ಕತ್ತು ಕುಯ್ದು ಪರಾರಿಯಾಗಿದ್ದ.
ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಮಧ್ಯೆ ಇದೀಗ ರಫೀಕ್ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ರಂಜಿತಾ ಕೊಲೆ ಕೃತ್ಯವನ್ನು ಖಂಡಿಸಿ ಇಂದು ಯಲ್ಲಾಪುರ ಬಂದ್ ಗೆ ಸಂಘ ಪರಿವಾರದ ಸಂಘಟನೆಗಳು ಕರೆ ನೀಡಿದ್ದವು. ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ರಫೀಕ್ ಮೃತದೇಹ ಅರಣ್ಯದಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.




