ಪುತ್ತೂರು: ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತು ದೋಚಲು ಯತ್ನಿಸಿದ ಪ್ರಕರಣ: ಅರ್ಚಕ, ಆತನ ಪತ್ನಿಯ ಬಂಧನ
ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಗೆ ಮಧ್ಯರಾತ್ರಿ ನುಗ್ಗಿ ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತುಗಳನ್ನು ದೋಚಲು ಯತ್ನಿಸಿದ ಪ್ರಕರಣ ಸಂಬಂಧಿಸಿ ಪುರೋಹಿತ ಕೆಲಸ ಮಾಡುವ ಅರ್ಚಕ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ಮುಡೂರು ನಿವಾಸಿ ಪ್ರಸ್ತುತ ಪಂಜದಲ್ಲಿ ಬಾಡಿಗೆ ಮನೆಯಲ್ಲಿರುವ ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ ಕೆ.ಎಸ್ ಸ್ವಾತಿ ರಾವ್ (25) ಎಂದು ಗುರುತಿಸಲಾಗಿದೆ.
ಡಿಸೆಂಬರ್ 17ರಂದು ಆರೋಪಿಗಳು ಎ.ವಿ ನಾರಾಯಣ ಮತ್ತು ಅವರ ಪತ್ನಿಯನ್ನು ಬೆದರಿಸಿ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ, ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿದ್ದು ಹೆದರಿಕೆಯಿಂದ ಜೋರಾಗಿ ಕಿರುಚಿದ್ದಾರೆ. ಇದರಿಂದ ಹೆದರಿದ ಆರೋಪಿಗಳು ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿದ್ದಾರೆ. ಮನೆಯಿಂದ ಯಾವುದೇ ಕಳ್ಳತನ ಆಗಿರುವುದಿಲ್ಲ. ಆದರೆ ಯಾರೋ ಇಬ್ಬರು ಸೇರಿ ಕಳವಿಗೆ ಯತ್ನಿಸಿದ್ದಾರೆ ಎಂದು ನಾರಾಯಣ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.




