January 31, 2026

37 ವರ್ಷಗಳ ಆದರ್ಶ ಶಿಕ್ಷಕ ಸೇವೆ ಸಲ್ಲಿಸಿದ ಕಾಡುಮಠ ಶಾಲೆಯ ಕುಸುಮ ಎನ್. ಅವರಿಗೆ ಬೀಳ್ಕೊಡುಗೆ: ಶಿಕ್ಷಣಕ್ಕೆ ಬದುಕನ್ನೇ ಅರ್ಪಿಸಿದ ಆದರ್ಶ ಶಿಕ್ಷಕಿ: ಆಶಾ ನಾಯಕ್

0
image_editor_output_image-945280350-1767255028352

ವಿಟ್ಲ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರದ ದೈಹಿಕ ಶಿಕ್ಷಣಾಧಿಕಾರಿಯೂ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಒಬ್ಬ ಉತ್ತಮ ಶಿಕ್ಷಕಿ ನಿವೃತ್ತಿಯಾಗುತ್ತಿರುವುದು ಹೆಮ್ಮೆಯ ಜೊತೆಗೆ ನೋವಿನ ಕ್ಷಣವೂ ಹೌದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ ಕುಸುಮ ಎನ್. ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.

“ತರಗತಿಗೊಂದು ಶಿಕ್ಷಕರು ಅಗತ್ಯ” – ಶಿವಪ್ರಸಾದ್ ಶೆಟ್ಟಿ ಅಭಿಪ್ರಾಯ
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ,ಮಾತಾಡಿ ಕುಸುಮ ಎನ್. ಅವರು ಹಲವಾರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, 2015ರಲ್ಲಿ ಕಾಡುಮಠ ಶಾಲೆಗೆ ವರ್ಗಾವಣೆಯಾಗಿ ಬಂದ ನಂತರ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಕ್ಕಳ ಪ್ರೀತಿಗೆ ಪಾತ್ರರಾದ ಅವರು ಶಿಕ್ಷಕರ ಸಂಘಟನೆಯಲ್ಲಿ ಸಹ ಕ್ರಿಯಾಶೀಲವಾಗಿ ಗುರುತಿಸಿಕೊಂಡಿರುವ ನಮ್ಮ ನೆಚ್ಚಿನ ಮಿತ್ರೆಯೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ತರಗತಿಗೊಂದು ಶಿಕ್ಷಕರು ಹಾಗೂ ಶಾಲೆಗೊಂದು ದೈಹಿಕ ಶಿಕ್ಷಕರನ್ನು ಸರಕಾರ ನೇಮಿಸಿದರೆ ಮಾತ್ರ ಸರಕಾರಿ ಶಾಲೆಗಳನ್ನು ಉಳಿಸಬಹುದು. ಇಂದು ಸರಕಾರಿ ಶಾಲೆಗಳು ಪ್ರಮಾಣಿಕ ಶಿಕ್ಷಕರ ಸೇವೆ ಹಾಗೂ ಎಸ್‌ಡಿಎಂಸಿ ಅದ್ಯಕ್ಷರ ಸದಸ್ಯರ ಸಹಕಾರದಿಂದ ಸುಗಮವಾಗಿ ನಡೆಯುತ್ತಿವೆ. ಅನೇಕ ಒತ್ತಡಗಳನ್ನು ಎದುರಿಸಿಯೂ ನಾವು ಶಿಕ್ಷಣದ ಗುಣಮಟ್ಟ  ಕಾಪಾಡಿಕೊಂಡು ಮುನ್ನಡೆಯುತ್ತಿದ್ದೇವೆ” ಎಂದು ಹೇಳಿದರು. ಕುಸುಮಾ ಅವರ ನಿವೃತ್ತಿ ಜೀವನವೂ ಯಶ್ಸಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು

“ಶಾಲೆಗೆ ಎರಡನೇ ತಾಯಿ – ಕುಸುಮ ಎನ್. ಅವರ ಕೊಡುಗೆ ಅನನ್ಯ” – ಅಸ್ಮ ಹಸೈನಾರ್
ಕಾರ್ಯಕ್ರಮದಲ್ಲಿ ಮಾತನಾಡಿದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಸ್ಮ ಹಸೈನಾರ್ ತಾಳಿತ್ತನೂಜಿ, ಕುಸುಮಾ ಎನ್. ಅವರು ಕೇವಲ ಶಿಕ್ಷಕಿಯಾಗಿ ಮಾತ್ರವಲ್ಲದೆ ಶಾಲೆಯ ಅಭಿವೃದ್ಧಿಗೆ ತಮ್ಮದೇ ಆದ ವೈಯಕ್ತಿಕ ಕೊಡುಗೆಗಳನ್ನು ನಿರಂತರವಾಗಿ ನೀಡಿದವರು ಎಂದು ಹೇಳಿದರು. ರೆಫ್ರಿಜರೇಟರ್, ಮಕ್ಕಳಿಗೆ ಬ್ಯಾಗ್‌ಗಳು, ಹಾಲು ಕುಡಿಯುವ ಗ್ಲಾಸ್‌ಗಳು ಸೇರಿದಂತೆ ಪ್ರತಿವರ್ಷ ಒಂದಲ್ಲೊಂದು ರೀತಿಯ ಸಹಕಾರ ನೀಡುತ್ತಾ ಶಾಲೆಯೊಂದಿಗಿನ ಅವರ ಬಾಂಧವ್ಯ ಅಪರೂಪದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಮಕ್ಕಳು ಹಾಗೂ ಪೋಷಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕುಸುಮಾ ಎನ್. ಅವರು ಮಕ್ಕಳಿಗೆ ಎರಡನೇ ತಾಯಿಯಾಗಿ ಕಾರ್ಯನಿರ್ವಹಿಸಿದ್ದರು. ಸರಕಾರದ ನಿಯಮಾನುಸಾರ ನಿವೃತ್ತಿ ಅನಿವಾರ್ಯವಾದ ಕಾರಣ ಬೇಸರದ ಮನಸ್ಸಿನಿಂದ ಇಂದು ಬೀಳ್ಕೊಡಬೇಕಾಗಿದೆ ಎಂದು ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದರು. ಅಲ್ಲದೆ, ದಾನಿಗಳಿಂದ ಶಾಲಾಭಿವೃದ್ಧಿಗೆ ನೆರವು ಸಂಗ್ರಹಿಸಿ ಮೂಲಭೂತ ಸೌಕರ್ಯಗಳ ಒದಗಿಕೆಗೆ ಹೆಚ್ಚಿನ ಒತ್ತು ನೀಡುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಾಲೆಯ ಸಮಗ್ರ ಬೆಳವಣಿಗೆಯಲ್ಲಿ ಕುಸುಮಾ ಎನ್. ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ, ಅವರಿಗೆ ಸೃಷ್ಟಿಕರ್ತನು ಆಯುರಾರೋಗ್ಯದೊಂದಿಗೆ ವಿಶ್ರಾಂತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ನೆನಪುಗಳ ಬುತ್ತಿ ಬಿಚ್ಚಿಟ್ಟ ನಿವೃತ್ತ ಶಿಕ್ಷಕಿ ಕುಸುಮ ಎನ್
ಬೀಳ್ಕೊಡುಗೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕುಸುಮಾ ಎನ್., ತಮ್ಮ ಶಿಕ್ಷಕವೃತ್ತಿಯ ಸುದೀರ್ಘ ಸೇವಾ ಅವಧಿಯ ನೆನಪುಗಳ ಬುತ್ತಿಯನ್ನು ಮನದಾಳದಿಂದ ಬಿಚ್ಚಿಡಿದರು. ಶಾಲಾಭಿವೃದ್ಧಿ ಸಮಿತಿಯ ಸಹಕಾರ, ಸಹಶಿಕ್ಷಕರ ಆತ್ಮೀಯತೆ, ವಿವಿಧ ಇಲಾಖೆಗಳ ಬೆಂಬಲ ಹಾಗೂ ತಮ್ಮ ಕುಟುಂಬದ ನಿರಂತರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಶಿಕ್ಷಣ ಸೇವೆಯ ಈ ಪಯಣದಲ್ಲಿ ಎದುರಾದ ಅನೇಕ ಅನುಭವಗಳು ಕಣ್ಮುಂದೆ ಹಾದುಹೋಗುತ್ತಿದ್ದಂತೆ ಅವರು ಗದ್ಗರಿತರಾಗಿ ಮಾತನಾಡಿ, ಈ ಶಾಲೆ ಮತ್ತು ಮಕ್ಕಳು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದು ಭಾವುಕವಾಗಿ ಹೇಳಿದರು.

“ಪ್ರಮಾಣಿಕ ಸೇವೆಗೆ ಕೃತಜ್ಞತೆ” – ಎಸ್‌ಡಿಎಂಸಿ ಅಧ್ಯಕ್ಷರ ಶ್ಲಾಘನೆ
ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರು ಮಾತಾಡಿ ಶಾಲಾಭಿವೃದ್ದಿ ಶ್ರಮಿಸಿ ಕೊಡುಗೆ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಿ, ನಿವೃತ್ತ ಶಿಕ್ಷಕಿಯ ಪ್ರಮಾಣಿಕ ಸೇವೆಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಅದ್ಯಕ್ಷರಾದ ಆರೀಪ್ ಕರೈ, ಬಂಟ್ವಾಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರೂ, ಸಮಗ್ರ ಶಿಕ್ಷಣ ಯೋಜನೆಯ ಸಾಮಜಿಕ ಪರಿಶೋದನೆಯ ಮಾರ್ಗದರ್ಶಿ ಅಧಿಕಾರಿ ಪ್ರದೀಪ್ ಡಿಸೋಜಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಮಾಜಿಕ ಪರಿಶೋದನೆ ವಿಭಾಗ ಬಂಟ್ವಾಳ ಇದರ ಅಂಜಲಿ ಶೇಠ್, ಶಿಕ್ಷಣ ಸಂಯೋಜಕರಾದ ರಮಾನಂದ, ಪ್ರತಿಮಾ, ಕೊಳ್ನಾಡು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಮೇಶ್, ನಿವೃತ್ತ ಮುಖ್ಯ ಶಿಕ್ಷಕಿ ಶಾರದ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಅಗರಿ, ಲೋಹಿತ್ ಅಗರಿ, ಸೌಮ್ಯಲತಾ ಕಾಡುಮಠ, ಅನಿತಾ ಶೆಟ್ಟಿಗಾರ್, ಮಾಜಿ‌ ಸದಸ್ಯರಾದ ವಿಶ್ವನಾಥ ಶೆಟ್ಟಿ ಪೆರ್ಲದಬೈಲ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸೃತ ಹಸೈನಾರ್ ತಾಳಿತ್ತನೂಜಿ, ಹಳೆ ವಿದ್ಯಾರ್ಥಿ ಸಂಘದ ಜಾನ್ ಡಿಸೋಜಾ, ಅಜೀಜ್ ಕೊಳ್ನಾಡು, ಸರಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಮಹಮ್ಮದ್ ಕುಕ್ಕುವಳ್ಳಿ, ಉನೈಸ್ ಪೆರಾಜೆ, ನೌಪಲ್, ಹಳೆ ವಿದ್ಯಾರ್ಥಿ ಮುಖಂಡರಾದ ಬಶೀರ್ ಕೊಳ್ನಾಡು, ಆಸಿಪ್ ಕರೈ, ಮುಖ್ಯೋಪಾದ್ಯಯರಾದ ಯೋಜಿತ ಮೇಡಂ, ಸಹಶಿಕ್ಷಕರಾದ ಪುಷ್ಪಾವತಿ, ಧನ್ಯ ಕೆ., ಗೌರವ ಶಿಕ್ಷಕಿಯಾದ ಸೇಕಿನಾ ಉಪಸ್ಥಿತರಿದ್ದರು.

ಸನ್ಮಾನ ಪತ್ರ ವಾಚನವನ್ನು ಕೀರ್ತೀ.ಕೆ.ವಾಚಿಸಿದರು, ಸಹ ಶಿಕ್ಷಕಿ ಲತಾ.ಎಸ್.ಸ್ವಾಗತಿಸಿ ಧನ್ಯವಾದ ತಿಳಿಸಿದರು. ಶಶಿ.ಬಿ.ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!