ಬಾಡಿಗೆ ನೆಪದಲ್ಲಿ ಕರೆದೊಯ್ದು ಯುವಕನಿಗೆ ಹಲ್ಲೆಗೈದು ಕೊಲೆ: ಇಬ್ಬರು ಆರೋಪಿಗಳು ಅರೆಸ್ಟ್
ಸುಳ್ಯ: ಬಾಡಿಗೆ ನೆಪದಲ್ಲಿ ಯುವಕನನ್ನುಕರೆದೊಯ್ದು ಬಳಿಕ ಆತನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆಗೊಳಗಾದ ವ್ಯಕ್ತಿ ಸಾವನಪ್ಪಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಆಟೋ ಚಾಲಕ ಅಬ್ದುಲ್ ಜಬ್ಬಾರ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ರಫೀಕ್ ಪಡು (41) ಹಾಗು ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್. (42) ಎಂದು ಗುರುತಿಸಲಾಗಿದೆ.
ಮಂಗಳೂರು ಉಡುಪಿ ಆಹಾರ ಉತ್ಪನ್ನಗಳು
ಅಕ್ಟೋಬರ್ 16 ರಂದು ಅಬ್ದುಲ್ ಜಬ್ಬಾರ್ ಎಂಬವರನ್ನು ಆರೋಪಿಗಳಾದ ಮೊಹಮ್ಮದ್ ರಫೀಕ್ ಮತ್ತು ಇತರರು, ಕಾರು ಬಾಡಿಗೆ ನೆಪದಲ್ಲಿ ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ, ಅಲ್ಲಿಂದ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಮನೆಗೆ ಕಳುಹಿಸಿದ್ದರು.
ಮರುದಿನ 17ರಂದು ಅಬ್ದುಲ್ ಜಬ್ಬಾರ್ ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಅಬ್ದುಲ್ ಜಬ್ಬಾರ್ ಸಾವಿಗೆ ರಫೀಕ್ ಪಡು ಮತ್ತು ಇತರರು ಹಲ್ಲೆ ನಡೆಸಿದ್ದೇ ಕಾರಣ ಎಂಬುದಾಗಿ ಜಬ್ಬಾರ್ ಪತ್ನಿ ಸುಮಯ್ಯಾ ಅವರು ಅಕ್ಟೋಬರ್ .18ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ತನಿಖೆಯಲ್ಲಿ ಹಲ್ಲೆಯಿಂದ ಜಬ್ಬಾರ್ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ದೃಡಪಟ್ಟಿದ್ದು, ಇದೀಗ ಹಲ್ಲೆ ಪ್ರಕರಣ ಣ ಕೊಲೆ ಪ್ರಕರಣವಾಗಿ ಮಾರ್ಪಾಡಾಗಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಆರೋಪಿ ರಫೀಕ್‍ನನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನನ್ನು ಹೆಚ್ಚಿನ ತನಿಖೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದೆ. ಮತ್ತೋರ್ವ ಆರೋಪಿ ಸಂಪಾಜೆಯ ಮಹೋಹರ್ ನನ್ನು ಕೂಡ ದಸ್ತಗಿರಿ ಮಾಡಲಾಗಿದ್ದು, ಅಲ್ಲದೇ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




