ಬಾವಿಗೆ ಬಿದ್ದು ಯುವಕ ಸಾವು
ಬೆಳಗಾವಿ: ಕಾಲು ಜಾರಿ ಬಾವಿಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬೆಳಗಾವಿಯ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ನಡೆದಿದೆ.
ಭೀಮಾಪುರವಾಡಿ ಗ್ರಾಮದ 21 ವರ್ಷದ ಯುವಕ ಸುನೀಲ ಬಾಳಾಸಾಹೇಬ ತಳಕರ ಮೃತ ಯುವಕ.
ಸುನೀಲ, ಕಳೆದ ಎರಡು ವರ್ಷಗಳಿಂದ ಕಬ್ಬು ಕಟಾವು ಮಾಡಲು ಹೋಗುತ್ತಿದ್ದ. ಮುಂಜಾನೆ ರೈತ ಮಹಾವೀರ ಖೋತ ಕಟಾವುದಾರರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಈ ವೇಳೆ ಸುನೀಲ ತಮ್ಮ ಸಹಚರರಿಗೆ ನೀರು ತರಲು ಹೋದಾಗ ಹೊಲದಲ್ಲಿನ ಬಾವಿಗೆ ಕಾಲು ಜಾರಿ ಬಿದ್ದಿದ್ದಾನೆ.
ನೀರು ತರಲು ಹೋದವನು ಇನ್ನೂ ಯಾಕೆ ಬಂದಿಲ್ಲ ಎಂದು ನೋಡಿದಾಗ ಬಾವಿಯ ಗೋಡೆ ಕುಸಿದು ಬಾ*ವಿಯಲ್ಲಿ ಬಿದ್ದಿರೋದು ಕಂಡುಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಮೃತದೇಹ ಬಾವಿಯಿಂದ ಹೊರತೆಗೆದಿದ್ದಾರೆ. ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




