ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸಂಪೂರ್ಣ ಸುಟ್ಟು ಹೋದ ಕಾರು
ಚಿಕ್ಕಮಗಳೂರು: ರೋಗಿಯೊಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆ ಮುಂಭಾಗ ಮಂಗಳವಾರ ನಡೆದಿದೆ.
ಜಿಲ್ಲಾಸ್ಪತ್ರೆ ಆವರಣಕ್ಕೆ ಕಾರು ಪ್ರವೇಶಿಸುತ್ತಿದ್ದಂತೆಯೇ ಕಾರಿನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಕಿಡಿ ನೋಡನೋಡುತ್ತಿದ್ದಂತೆಯೇ ವ್ಯಾಪಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಂಬುಲೆನ್ಸ್ ಚಾಲಕರು ಕಾರಿನಲ್ಲಿದ್ದ ರೋಗಿ ಹಾಗೂ ಇತರರನ್ನು ಕೆಳಗಿಳಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಆಸ್ಪತ್ರೆಯಲ್ಲಿದ್ದ ನೀರು ಮತ್ತು ಆಕ್ಸಿಜನ್ ಸಿಲಿಂಡರ್ ಬಳಸಿಕೊಂಡು ಬೆಂಕಿ ನಂದಿಸಲು ಯಶಸ್ವಿಯಾದರು. ಅಷ್ಟರಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.




