ರಾಮಲ್ ಕಟ್ಟೆ: ಸ್ಕೂಟರ್ಗೆ ರಿಕ್ಷಾ ಢಿಕ್ಕಿ: ಸ್ಕೂಟರ್ ಸವಾರ ಉಸ್ಮಾನ್ ಮೃತ್ಯು
ಬಂಟ್ವಾಳ: ಸ್ಕೂಟರ್ ಒಂದಕ್ಕೆ ರಿಕ್ಷಾ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.
ರಾಮಲ್ ಕಟ್ಟೆ ನಿವಾಸಿ ಉಸ್ಮಾನ್ ಎಂಬವರಿಗೆ ರಿಕ್ಷಾ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟ ಬಗ್ಗೆ ಪೋಲೀಸ್ ಮೂಲಗಳು ಮಾಹಿತಿ ನೀಡಿವೆ.
ಉಸ್ಮಾನ್ ಅವರು ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಉಸ್ಮಾನ್‌ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಕೂಡಲೇ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ.
ಅಪರಿಚಿತ ರಿಕ್ಷಾ ಡಿಕ್ಕಿಯಾಗಿ ಪರಾರಿಯಾಗಿರುವುದನ್ನು ಸ್ಥಳೀಯರು ನೋಡಿದ್ದಾರೆ ಮತ್ತು ಸಿ.ಸಿ.ಕ್ಯಾಮರಾದಲ್ಲಿ ಕೂಡ ಸೆರೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಹಿಟ್ ಎಂಡ್ ರನ್ ಮಾಡಿದ ವಾಹನದ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




