December 21, 2025

ಉಡುಪಿ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನ ರೆಸಾರ್ಟ್‌ನಲ್ಲಿ ಅಕ್ರಮ ವಿದೇಶಿಯರಿಗೆ ಆಶ್ರಯ: ಪ್ರಕರಣ ದಾಖಲು

0
n6938098851766238342845517d5fae0452e3b0ea88f8630f5be4ddde0a03918cad30c0f383ecc9b93d29ad.jpg

ಉಡುಪಿ: ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನಿರ್ವಹಣೆ ಮಾಡುತ್ತಿರುವ ರೆಸಾರ್ಟ್‌ನಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ವಿದೇಶಿಯರಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಬಾರಕೂರಿನ ಸರಕಾರಿ ಆಸ್ಪತ್ರೆಗೆ ಒಬ್ಬರು ವಿದೇಶಿ ಗರ್ಭಿಣಿಯೊಬ್ಬರು ಚಿಕಿತ್ಸೆಗೆಂದು ಬಂದಿದ್ದು, ಆ ವೇಳೆ ಅಲ್ಲಿನ ವೈದ್ಯರು ಆಕೆಯೊಂದಿಗೆ ದಾಖಲಾತಿಗಳನ್ನು ಕೇಳಿದ್ದರು. ಆದರೆ ಆಕೆ ಯಾವುದೇ ದಾಖಲಾತಿ ಹೊಂದಿಲ್ಲ ಎಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯವರು ಸ್ಥಳೀಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡಿದ್ದರು. ಅದರಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ, ರೀಪಕ್ ದಮಾಯಿ(28), ಸುನೀತಾ ದಮಾಯಿ(27), ಊರ್ಮಿಳಾ(19), ಕೈಲಾಶ್ ದಮಾಯಿ(18) ಕಪಿಲ್ ದಮಾಯಿ(19), ಸುನೀತಾ ದಮಾಯಿ(21) ಹಾಗೂ ಮೂವರು ಸಣ್ಣ ಮಕ್ಕಳು, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಗೆ ಸೇರಿದ ಹನೆಹಳ್ಳಿ ಗ್ರಾಮದ ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ.

ಮೂವರು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಭಾರತೀಯ ರಾಷ್ಟ್ರೀಯತೆಯನ್ನು ಹೊಂದದೇ ಇದ್ದು, ಯಾವ ದೇಶದವರು ಎಂಬುದಕ್ಕೆ ಇವರಲ್ಲಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ಪ್ರಸಕ್ತ ಇವರು ಯಾವ ದೇಶದ ಪ್ರಜೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇವರು ಯಾವುದೋ ರಾಷ್ಟ್ರದ ಪ್ರಜೆಗಳಾಗಿದ್ದು, ಅವರಲ್ಲಿ ಯಾವುದೇ ಐಡೆಂಟಿಟಿ ಕಾರ್ಡ್, ಜನ್ಮ ದಾಖಲೆ, ಪಾಸ್ ಪೋರ್ಟ್, ಪ್ರಯಾಣ ದಾಖಲೆ ಹಾಗೂ ವಿಸಾವನ್ನು ಹೊಂದದೇ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ವಿದೇಶಿಗರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇವರು ಯಾವ ದೇಶದಿಂದ ಬಂದಿರುವ ಬಗ್ಗೆ ಹಾಗೂ ಯಾವ ದೇಶದ ಪ್ರಜೆಗಳು ಎಂದು ತಿಳಿಸಲು ಅವರಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲ. ವಿದೇಶಿ ಪ್ರಜೆಗಳು ಭಾರತಕ್ಕೆ ಬಂದಾಗ ಅಥವಾ ಇಲ್ಲಿ ನೆಲೆಸುವಾಗ ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸದೆ, ದಾಖಲೆಗಳಿಲ್ಲದವರಿಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!