ಬಂಟ್ವಾಳ: ಹೆದ್ದಾರಿ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದ ಆ್ಯಕ್ಟಿವಾ ಸ್ಕೂಟರ್: ಸವಾರನಿಗೆ ಗಂಭೀರ ಗಾಯ
ಬಂಟ್ವಾಳ: ಸವಾರನ ನಿಯಂತ್ರಣ ತಪ್ಪಿ ಆ್ಯಕ್ಟಿವಾ ಸ್ಕೂಟರ್ ಹೆದ್ದಾರಿ ಬದಿಯ ಡಿವೈಡರ್ ಗೆ ಡಿಕ್ಕಿಯಾಗಿ ಮಗುಚಿ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಗಡಿಯಾರ ಗ್ರಾಮದಲ್ಲಿ ನಡೆದಿದೆ.
ಕಳಸ ನಿವಾಸಿ, ಸಂದೇಶ್ ಗಾಯಗೊಂಡವರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂದೇಶ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡ ರಾತ್ರಿ 2 ಗಂಟೆ ವೇಳೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಾ ಗಡಿಯಾರ ಸಮೀಪ ತಲುಪಿದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿಯಾಗಿದೆ.
ಈ ಸಂದರ್ಭ ಸಂದೇಶ್ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ತೀವ್ರ ಗಾಯಗೊಂಡಿದ್ದ ಸಂದೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬಹಳಷ್ಟು ಸಮಯ ಯಾರ ಗಮನಕ್ಕೂ ಬಂದಿರಲಿಲ್ಲ. ಮುಂಜಾನೆ ಸುಮಾರು 3.50 ಗಂಟೆ ವೇಳೆಗೆ ಮಂಗಳೂರಿನ ಮೀನು ಮಾರ್ಕೆಟಿಗೆ ತೆರಳುತ್ತಿದ್ದ ಗಡಿಯಾರ ನಿವಾಸಿಗಳಾದ ಹಮೀದ್ ಮತ್ತು ಝಿಯಾನ್ ಎಂಬವರು ಗಮನಿಸಿ ಕೂಡಲೇ ಮಾಣಿಯ ಸೋಷಿಯಲ್ ಇಕ್ವಾ ಆಂಬ್ಯುಲೆನ್ಸ್ ಮೂಲಕ ಸಂದೇಶರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.




