ಮಂಗಳೂರು: ತಾಯಿ, ಮಗಳು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ವಿಡಿಯೊ ವೈರಲ್
ಮಂಗಳೂರು: ತಾಯಿ ಮಗಳು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಡುಶೆಡ್ಡೆ ಗ್ರಾ.ಪಂ. ಆವರಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ತಾಯಿ ಮತ್ತು ಮಗಳು ವಾಸಿಸುತ್ತಿದ್ದು, ಇವರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತಾಯಿ ಕಾವೂರು ಠಾಣೆಗೆ ತೆರಳಿ ದೂರುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ತಾಯಿ ಮತ್ತು ಮಗಳಿಗೆ ಬುದ್ಧಿ ಹೇಳಿ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ತಾಯಿಯು ಮೂಡುಶೆಡ್ಡೆ ಗ್ರಾ.ಪಂ.ಗೆ ತೆರಳಿ ಮಗಳ ವಿರುದ್ಧ ದೂರು ನೀಡತೊಡಗಿದ್ದಾರೆ. ಮೂರು ದಿನದ ಹಿಂದೆ ತಾಯಿ ಗ್ರಾ.ಪಂ. ಕಚೇರಿಗೆ ತೆರಳಿ ದೂರು ನೀಡುತ್ತಿದ್ದಾಗ ಮಗಳು ತಾಯಿಯನ್ನು ತಳ್ಳಿದ್ದಾಳೆ. ತಾಯಿ ಕೂಡ ಮಗಳಿಗೆ ತಿರುಗೇಟು ನೀಡಿದ್ದರೂ ಕೂಡ ಆಕ್ರೋಶಗೊಂಡ ಮಗಳು ಚಪ್ಪಲಿಯಿಂದ ತಾಯಿಯ ಮುಖಕ್ಕೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಇದನ್ನು ಗ್ರಾ.ಪಂ. ಕಚೇರಿಯಲ್ಲಿದ್ದವರು ವೀಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗಳ ಅಮಾನವೀಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.




