ಮಂಗಳೂರು: ವಕೀಲ ಖಾಸೀಂ ನೌಷಾಧ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ದಿನೇಶ್ ಶೆಟ್ಟಿ ಬಂಧನ
ಮಂಗಳೂರು: ವಕೀಲ ಖಾಸೀಂ ನೌಷಾಧ್ ಕೊಲೆ ಪ್ರಕರಣದಲ್ಲಿ ಜೀವಾವಧಿಶಿಕ್ಷೆಗೆ ಗುರಿಯಾಗಿ ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿ ಬಳಿಕ ಹೈಕೋರ್ಟ್ ಗೆ ಅಫೀಲು ಹೋಗಿ ಬಿಡುಗಡೆಯಾದ ಬಳಿಕವೂ ಮತ್ತೆ ಕ್ರೈಂ ಜಗತ್ತಿಗೆ ಕಾಲಿಟ್ಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ನಾಳ ಗ್ರಾಮದ ಜಾರಿಗೆಬೈಲು ನಾಯತರ್ಪುವಿನ ದಿನೇಶ್ ಶೆಟ್ಟಿ ಅಲಿಯಾಸ್ ದಿನ್ನು (40) ಎಂಬಾತನ್ನು ಬಂಧಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
2019ರಲ್ಲಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣ, 2022ರಲ್ಲಿ ಬಂದರು ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ ಮತ್ತು 2023ರಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಮಂಗಳವಾರ ಉತ್ತರ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2009ರಲ್ಲಿ ಭೂಗತ ಲೋಕದ ಪಾತಕಿಗಳಾದ ರವಿ ಪೂಜಾರಿ ಮತ್ತು ಕಲಿ ಯೊಗೀಶನಿಂದ ಸುಪಾರಿ ಪಡೆದು ವಕೀಲ ಖಾಸಿಂ ನೌಷಾದ್ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಸಾಬೀತಾದ ಹಿನ್ನೆಲೆಯಲ್ಲಿ ದಿನೇಶ ಹಾಗೂ ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆಯಾಗಿತ್ತು. 11 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದ ಅನಂತರ ಹೈಕೋರ್ಟಿನಲ್ಲಿ ಅಪೀಲು ಸಲ್ಲಿಸಿ, 2019ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದ. ಜೈಲಿನಿಂದ ಹೊರ ಬಂದ ಬಳಿಕವೂ ಮತ್ತೆ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ದಿನೇಶ್ ಶೆಟ್ಟಿ, ವಿರುದ್ದ ಹಲವು ಪ್ರಕರಣ ದಾಖಲಾಗಿದೆ.




