ಪತಿ, ಅತ್ತೆಯ ಕಿರುಕುಳಕ್ಕೆ ಮನನೊಂದು ಮಹಿಳೆ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ
ಹಾಸನ: ಪತಿ ಹಾಗೂ ಅತ್ತೆಯಿಂದ ಕಿರುಕುಳಕ್ಕೆ ಮನನೊಂದು ಗೃಹಿಣಿಯೊಬ್ಬರು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ ನಡೆದಿದೆ.
ಮಹಾದೇವಿ (29) ಆತ್ಮಹತ್ಯೆಗೆ ಶರಣಾದ ಮಹಿಳೆ. ಮಹಾದೇವಿ ಮೂರು ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಸೀಬಿಹಳ್ಳಿ ಗ್ರಾಮದ ಕುಮಾರ್ ಜೊತೆ ಎರಡನೇ ವಿವಾಹವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಮಹಾದೇವಿ ಎರಡನೇ ಮದುವೆ ಸಂದರ್ಭ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ 100 ಗ್ರಾಂ ಚಿನ್ನ ನೀಡಿದ್ದರು.
ಆದರೆ ಇತ್ತೀಚಿಗೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಕುಮಾರ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ.
ಕುಮಾರ್ ಕಿರುಕುಳ ತಾಳಲಾರದೆ ಮಹಾದೇವಿ ಕಳೆದ ಹದಿನೈದು ದಿನಗಳ ಹಿಂದೆ ತವರು ಮನೆ ಸೇರಿದ್ದರು. ಆದರೂ ಸುಮ್ಮನಾಗದ ಪತಿ ಕುಮಾರ್ ಪತ್ನಿಗೆ ಅಶ್ಲೀಲ ಮೆಸೇಜ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ.
ಗುರುವಾರ ಹಾಸನಕ್ಕೆ ಬಂದಿದ್ದ ಮಹಾದೇವಿಗೆ ಬಸ್ ನಿಲ್ದಾಣದಲ್ಲೇ ಕುಮಾರ್ ನಿಂದಿಸಿದ್ದ. ಇದರಿಂದ ಮನನೊಂದಿದ್ದ ಮಹಾದೇವಿ ನಂತರ ಹಾಸನ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ವೀಡಿಯೋ ಮಾಡಿದ್ದರು.





