ರಾಯಲ್ ಎನ್ ಫೀಲ್ಡ್ ಬೈಕ್ ಗಳ ಕಳವು: ಒಂದು ತಿಂಗಳಲ್ಲಿ ಕದ್ದ 42 ಬೈಕ್ ಗಳ ಜಪ್ತಿ
ಬೆಂಗಳೂರು: ಬರೀ ರಾಯಲ್ ಎನ್ ಫೀಲ್ಡ್ ಬೈಕ್ ಕದಿಯುತ್ತಿದ್ದ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 1 ಕೋಟಿ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ತಮಿಳುನಾಡಿನ ರಾಜು (38) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ ಒಂದು ತಿಂಗಳ ಅವಧಿಯಲ್ಲಿ ಕಳ್ಳತನ ಮಾಡಿದ್ದ 42 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಠಾಣಾ ವ್ಯಾಪ್ತಿಯ ಜಯನಗರ ಎರಡನೇ ಬ್ಲಾಕ್ ನಿವಾಸಿಯೊಬ್ಬರು ವಿಲ್ಸನ್ ಗಾರ್ಡನ್‌ನಲ್ಲಿರುವ ಸ್ನೇಹಿತನ ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಬಾತ್ಮೀದಾರರ ಮಾಹಿತಿ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ಸುಳಿವು ಆಧರಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ದ್ವಿಚಕ್ರ ವಾಹನ ಸಮೇತ ಆರೋಪಿಯನ್ನು ಬಂಧಿಸಿದರು.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ನಗರದ ವಿವಿಧ ಕಡೆ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ತಮಿಳುನಾಡಿನಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಆರೋಪಿಯ ಅಕ್ಟೋಬರ್ 17ರಿಂದ ನವೆಂಬರ್ 7ರ ಅವಧಿಯಲ್ಲಿ ಕಳವು ಮಾಡಿದ್ದ 42 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಿಂದ ಬಸ್‌ನಲ್ಲಿ ಬರುತ್ತಿದ್ದ ಆರೋಪಿ, ನಗರದಲ್ಲಿ ಬೈಕ್‌ನಲ್ಲಿ ಸಂಚರಿಸಿ ಎನ್‌ಫೀಲ್ಡ್ ವಾಹನದ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ.
ದುಬಾರಿ ಬೆಲೆ ಎಂಬ ಕಾರಣಕ್ಕೆ ಈ ವಾಹನಗಳನ್ನು ಕಳವು ಮಾಡಿದ ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರಿಗೆ ₹25 ಸಾವಿರ ಹಾಗೂ ₹ 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ತಮಿಳುನಾಡಿನಲ್ಲಿ ನಂಬರ್ ಪ್ಲೇಟ್ ತೆಗೆದು ಓಡಿಸುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಆ ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ’ ಎಂದು ಹೇಳಿದರು.





