February 1, 2026

ಉಳ್ಳಾಲದ ಸಯ್ಯದ್ ಮದನಿ ದರ್ಗಾದ ಕಮಿಟಿಯಲ್ಲಿ ಭ್ರಷ್ಟಾಚಾರ: ಕಮಿಟಿ ಸದಸ್ಯರಿಂದಲೇ ಆರೋಪ

0
image_editor_output_image-1411925036-1762926820839.jpg

ಮಂಗಳೂರು: ಖ್ಯಾತ ಉಳ್ಳಾಲದ ಸಯ್ಯದ್ ಮದನಿ ದರ್ಗಾದಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ದರ್ಗಾ ಕಮಿಟಿಯಲ್ಲಿ 55 ಮಂದಿ ಸದಸ್ಯರಿದ್ದರೂ ಕೇವಲ ಏಳೆಂಟು ಮಂದಿ ಸೇರಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಮಿಟಿ ಸದಸ್ಯರೇ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಕ್ಫ್ ಇಲಾಖೆಗೆ ಸೇರಿದ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಮತ್ತು ಜುಮಾ ಮಸೀದಿಯ ಆಡಳಿತದಲ್ಲಿ ಭಾರೀ ಅವ್ಯವಹಾರ ಆಗುತ್ತಿದ್ದು, ಈ ಬಗ್ಗೆ ನಾವು ಪ್ರಶ್ನೆ ಮಾಡಿದರೂ ಕ್ಯಾರೆನ್ನುತ್ತಿಲ್ಲ. ವಕ್ಫ್ ಇಲಾಖೆಯವರಿಗೆ, ಕ್ಷೇತ್ರದ ಶಾಸಕ ಯುಟಿ ಖಾದರ್ ಅವರಿಗೂ ದೂರು ನೀಡಿದ್ದೇವೆ. ಆರ್ಟಿಐನಲ್ಲಿ ಮಾಹಿತಿ ಕೇಳಿದರೂ ಮಾಹಿತಿ ನೀಡುತ್ತಿಲ್ಲ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಉಳ್ಳಾಲ ದರ್ಗಾ ಉರೂಸ್ ಗೆ ರಾಜ್ಯ ಸರಕಾರದಿಂದ ಏಳು ಕೋಟಿ ಅನುದಾನ ಮಂಜೂರಾಗಿದ್ದು, ಇದಲ್ಲದೆ ದಾನಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹ ಆಗಿದೆ.

ದರ್ಗಾ ಕಮಿಟಿಯಲ್ಲಿ 55 ಮಂದಿ ಸದಸ್ಯರಿದ್ದರೂ ಕೇವಲ ಏಳೆಂಟು ಮಂದಿ ಸೇರಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸದಸ್ಯರ ಸಭೆ ಕರೆಯದೆ ತಮಗೆ ಬೇಕಾದಂತೆ ನಿರ್ಣಯಗಳನ್ನು ಮಾಡಿಕೊಂಡು ಖರ್ಚು- ವೆಚ್ಚದ ಲೆಕ್ಕ ತೋರಿಸದೆ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆಡಳಿತ ವಹಿಸಿಕೊಂಡು ಎರಡು ವರ್ಷ ಕಳೆದರೂ ಒಂದು ಬಾರಿಯೂ ಮಹಾಸಭೆ ನಡೆಸಿಲ್ಲ. ಲೆಕ್ಕಪತ್ರ ಕೇಳಿದ ದರ್ಗಾ ಕಮಿಟಿಯ 30ಕ್ಕೂ ಹೆಚ್ಚು ಸದಸ್ಯರನ್ನು ಉಚ್ಛಾಟಿಸುವ ಬೆದರಿಕೆ ಹಾಕಿ ಸಭೆಗಳಿಗೆ ಕರೆಯದೆ ದೂರ ಇಟ್ಟಿದ್ದಾರೆ. ಇದಕ್ಕೆ ಸ್ಥಳೀಯ ಪ್ರಭಾವಿ ರಾಜಕೀಯ ನಾಯಕರ ಕೃಪಾಶೀರ್ವಾದ ಇದೆಯೆಂಬ ಸಂಶಯ ಇದೆ. ಹೀಗಾಗಿ ಆಡಳಿತ ಕಮಿಟಿ ವಿರುದ್ಧ ನಾವು ಅವಿಶ್ವಾಸ ಹೊಂದಿದ್ದು, ವಕ್ಫ್ ಬೋರ್ಡ್ ಕೂಡಲೇ ಸಭೆ ಕರೆದು ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ದರ್ಗಾ ಕಮಿಟಿ ಸದಸ್ಯರಾದ ಫಾರೂಕ್ ಮುಕ್ಕಚ್ಚೇರಿ, ರಿಯಾಜ್ ಅಲೇಕಳ, ಮಹಮ್ಮದ್ ಮುಸ್ತಾಫ, ತಹಸೀನ್ ತೋಟ, ಅಬ್ದುಲ್ ಅಜೀಜ್ ಕೋಡಿ, ಅಬ್ದುಲ್ ಸಮದ್ ಮೇಲಂಗಡಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!