February 1, 2026

ಇಂದು ಕಾರ್ತಿಕ ಹುಣ್ಣಿಮೆ ವಿಟ್ಲ ಶ್ರೀ ಪಂಚಲಿಂಗೇಶ್ವರನಿಗೆ ವನ ಭೋಜನ ಸೇವೆ: ರಾಧಾಕೃಷ್ಣ ಎರುಂಬು

0
image_editor_output_image-161727850-1762306725196

ಭಗವಂತನಿಗೆ ಅರ್ಪಿತ ” ಎಂಬ ಮನಸ್ಸಿನ ಭಾವಕ್ಕೆ ಮಿಗಿಲಾದ ಸೇವೆ ಇಲ್ಲ. ನಮ್ಮ ಹಿಂದಿನ ಪೀಳಿಗೆ ಇವನ್ನೆಲ್ಲ ಅತಿ ಭಕ್ತಿ ಪುರಸ್ಸರವಾಗಿ ಮಾಡುತ್ತಿದ್ದರೆಂಬ ಐತಿಹ್ಯ ಇನ್ನೂ ಜೀವಂತ . ಇದಕ್ಕೆ ನಿದರ್ಶನ ಕಾರ್ತಿಕ ಹುಣ್ಣಿಮೆಯಂದು ವಿಟ್ಲ ಶ್ರೀ ಪಂಚಲಿಂಗೇಶ್ವರನಿಗೆ ವನ ಭೋಜನ ಸೇವೆ.

*ದಿನ ಮಹತ್ವ*:- ಹಿಂದೂ ಧರ್ಮದಲ್ಲಿ ಕಾರ್ತಿಕ ಪೂರ್ಣಿಮೆಗೆ ವಿಶೇಷ ಮಹತ್ವವಿದೆ.  ಈ ದಿನ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದನೆಂದು ನಂಬಲಾಗಿದೆ, ಆದ್ದರಿಂದ ಈ ದಿನವನ್ನು ತ್ರಿಪುರಿ ಪೂರ್ಣಿಮಾ ಎಂದೂ ಕರೆಯುತ್ತಾರೆ. ಕಾರ್ತಿಕ ಪೂರ್ಣಿಮೆಯ ದಿನದಂದು ಸ್ನಾನ, ದಾನ ಮತ್ತು ದೀಪಗಳನ್ನು ದಾನ ಮಾಡುವುದು ಬಹಳ ಮಹತ್ವದ್ದಾಗಿದೆ. ಈ ದಿನದಂದು ಲಕ್ಷ್ಮಿಸಹಿತ ವಿಷ್ಣು  ಹಾಗೂ ಚಂದ್ರದೇವನನ್ನು ಪೂಜಿಸುವುದರಿಂದ ಭಕ್ತರ ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ದೂರವಾಗುತ್ತವೆ. ಈ ದಿನ  ಪವಿತ್ರ ನದಿ ಅಥವಾ ತೀರ್ಥ ಸ್ನಾನ ಮಾಡುವುದು ತುಂಬಾ ಫಲಕಾರಿಯಾಗಿದೆ. ಕಾರ್ತಿಕ ಪೂರ್ಣಿಮೆಯ ದಿನದಂದು ವಿಶೇಷ ಯೋಗವು ರೂಪುಗೊಳ್ಳುತ್ತದೆ, ಆದ್ದರಿಂದ ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ ಮತ್ತು “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಜಪಿಸಿ.  ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ.

*ವಿಟ್ಲ ಪಂಚಲಿಗೇಶ್ವರನಿಗೆ ವನ ಭೋಜನ*:-  ದೊಂಬ ಹೆಗಡೆ ಮನೆತನ ವಿಟ್ಲ ಸಂಸ್ಥಾನದ ರಾಜರಾಗಿದ್ದ  ಕಾಲದಿಂದ ವಿಟ್ಲ ಸೀಮೆ, ಇಷ್ಟಿಕಾಪುರ,  16 ಸೀಮೆ , ಆ ಗ್ರಾಮಗಳಲ್ಲಿ ಹಲವು ದೈವ ದೇವರ ಆಲಯ ಆಲಡೆಗಳು ರಾಜರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದು ವಿಟ್ಲ ಪಂಚಲಿಂಗಶ್ವರ ಸೀಮೆಗೆಲ್ಲ ಒಡೆಯನೆ ಹೌದು. ಈ ದಿನ ದೇವರ ವನ ವಿಹಾರ ಮತ್ತು ವನ ಭೋಜನ ವಿಶೇಷ ಸೇವೆ ನಡೆಯುತ್ತದೆ. ವರ್ಷದ ವಿಶೇಷ ದಿನಗಳಲ್ಲಿ ಅವನಿಗೆ ಸಲ್ಲುವ ಸೇವೆ ಆ ಕಾಲಕ್ಕೆ ಕೃಷಿ ಸಂಪನ್ಮೂಲಗಳಿಂದಲೆ. ಸರ್ವ ಭಕ್ತರ ಮುಗ್ದ ಸಮರ್ಪಣೆಯ ಭಾವಕ್ಕೆ ಎಣೆಯಿಲ್ಲ. ಈ ವಿಶೇಷ ಸೇವೆಗಳಲ್ಲಿ ಕಾರ್ತಿಕ ಹುಣ್ಣಿಮೆಯೂ ಒಂದು.
ಈ ಬಾರಿಯ ಆಚರಣೆ ಇಂದು ನವೆಂಬರ್ 5, 2025ರಂದು. ಮಧ್ಯಾಹ್ನದ ಪೂಜೆ ಸುಮಾರು 12.10ಕ್ಕೆ ನಡೆದು ಬಳಿಕ ಪಂಚಲಿಂಗನ ಪಾದುಕೆಯನ್ನು ಪೀಠದ ಮೇಲೆ ಇರಿಸಿ, ಅರಮನೆಯ ರಸ್ತೆಯ ಬಳಿ ಅರಮನೆ ಮತ್ತು ನೆರೆದ ಭಕ್ತರಿಂದ ಆರತಿಸೇವೆ ಮಾಡಲ್ಪಟ್ಟು ದೇವಳದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದ ಬಾಕಿಮಾರು ಗದ್ದೆಯ ಬಳಿ ಇರುವ ಜಠಾಧಾರಿ ಕೆರೆಯ ಬಳಿಯ ವನಕ್ಕೆ(ಪ್ರಸ್ತುತ ವೃಕ್ಷ ಮಾತ್ರವಿದೆ) ಮಧ್ಯಾಹ್ನ 1.30 ರ ಸುಮಾರಿಗೆ ಬಂದು ಅಲ್ಲಿ ಸಮಸ್ತ ರಿಂದ ಪೂಜೆ, ಹಣ್ಣುಕಾಯಿ ಸಮರ್ಪಣೆ, ಭೋಜನ ಪ್ರಸಾದ ಸಮರ್ಪಣೆ ಗೊಂಡು ಬಳಿಕ ಬಂದಿರುವ ಸಮಸ್ತ ರಿಗೂ ಅನ್ನಸಂತರ್ಪಣೆ ಜರಗುತ್ತದೆ. ಈ ಸೇವೆ ಇನ್ನೂ ನೆಲದ ಮೇಲೆ ಚಾಪೆ ಹಾಕಿ ಎಲೆಯಲ್ಲಿ ಭೋಜನ ಸೇವೆ ನಡೆಸುವುದನ್ನು ಕಾಪಿಟ್ಟು ಕೊಂಡಿರುವುದು ಸ್ತುತ್ಯರ್ಹ. ಹಾಗೆ ಸೌದೆ ಉಪಯೋಗಿಸಿ ಅಡುಗೆ ತಯಾರಿ  ಮಾಡಲಾಗುತ್ತದೆ ಎಂಬುದೂ ಸಂಪ್ರದಾಯದ ಉಳಿಯುವಿಕೆಗೆ ಉಪಾದಿಯಾಗಿದೆ. ಇಲ್ಲಿಯ ಈ ವ್ಯವಸ್ಥೆಗೂ ಅರಸರ ಆ ಕಾಲದಿಂದಲೂ ನೆಕ್ಕರೆಕಾಡು ಮತ್ತು ಆ ಪರಿಸರದ ಸಮಸ್ತರ ವಸ್ತುರೂಪದ ಸಮರ್ಪಣೆ ವಾಡಿಕೆಯಂತೆ ನಡೆಯುತ್ತದೆ. ಅದಕ್ಕೂ ಉಂಬಳಿ ವ್ಯವಸ್ಥೆ ಆ ಕಾಲಕ್ಕೆ ಇದ್ದಿರಬಹುದೇನೋ?
ದೇವರು ಬರುವುದು ಎಂಬ ಈ ಪರಿಸರದ ಜನರ ಸಂಭ್ರಮಕ್ಕೆ ಇಂದೂ ಮಾನ್ಯತೆ ಇದೆ. ಬಳಿಕ 3.00 ಗಂಟೆಯ ಹೊತ್ತಿಗೆ  (ಪಾದುಕೆ) ದೇವರನ್ನು ವಿಟ್ಲದ ಮುಖ್ಯ ರಸ್ತೆಯ ಮೂಲಕ ವಿವಿಧ ಭಜಕರಿಂದ ಆರತಿ ಸೇವೆ ಸ್ವೀಕರಿಸಿ ದೇವಳಕ್ಕೆ ತರಲಾಗುತ್ತದೆ. ಸಂಜೆ ಸುಮಾರು 7.30ರ ಹೊತ್ತಿಗೆ ದೇವರ ವಿಶೇಷ ಉತ್ಸವ ಬಲಿ ( ವಾರ್ಷಿಕ ಉತ್ಸವದಂತೆ) ವಿವಿಧ ವಾಧ್ಯ, ಘೋಷಗಳೊಂದಿಗೆ  ನಡೆದು ಬಟ್ಟಲು ಕಾಣಿಕೆ ಮೂಲಕ ಪ್ರಸಾದ ವಿತರಿಸಲಾಗುತ್ತದೆ. ವಿಟ್ಲ ಸೀಮೆಯ ಸರ್ವರಿಗೂ ಈ ಉತ್ಸವ ಭಗವಂತನ ಸೇವೆಗೆ ಒಂದು ಅವಕಾಶವನ್ನೊದಗಿಸಿದೆ.
ದೇವರ ಕೃಪೆಗೆ ಪಾತ್ರರಾಗೋಣ.

Leave a Reply

Your email address will not be published. Required fields are marked *

error: Content is protected !!