ಸರಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಚಿಕಿತ್ಸೆ ಪಡೆಯುತ್ತಿದ್ದ ಆರು ರೋಗಿಗಳು ಸಾವು
ಜೈಪುರ: ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ರೋಗಿಗಳು ಸಾವಿಗೀಡಾಗಿದ್ದಾರೆ.
ಮೃತರನ್ನು ಪಿಂಟು (ಸಿಕಾರ್‌ನವರು), ದಿಲೀಪ್ (ಜೈಪುರದ ಆಂಧಿಯವರು), ಶ್ರೀನಾಥ್, ರುಕ್ಮಿಣಿ, ಖುರ್ಮಾ (ಎಲ್ಲರೂ ಭರತ್‌ಪುರದವರು) ಮತ್ತು ಬಹದ್ದೂರ್ (ಜೈಪುರದ ಸಂಗನೇರ್‌ನವರು) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟೋರೇಜ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಾಗ 11 ರೋಗಿಗಳು ನ್ಯೂರೋ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಟ್ರಾಮಾ ಸೆಂಟರ್ ನ ಅಧಿಕಾರಿಗಳು ತಿಳಿಸಿದ್ದಾರೆ.
ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಇತರ ಹದಿನಾಲ್ಕು ರೋಗಿಗಳನ್ನು ಬೇರೆ ಐಸಿಯುಗೆ ದಾಖಲಿಸಲಾಗಿದೆ ಮತ್ತು ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು’ ಎಂದು ಡಾ. ಧಾಕಡ್ ಹೇಳಿದರು.




